ಬೆಂಗಳೂರು: ರಾಜ್ಯದಲ್ಲಿ ಈವರೆಗೆ 48.05 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡಿದ್ದು, ಕರ್ನಾಟಕ 6 ನೇ ಸ್ಥಾನದಲ್ಲಿದೆ
ಸುಮಾರು 48.05 ಲಕ್ಷ ಜನರಿಗೆ ಸೋಮವಾರದವರೆಗೆ ಕೋವಿಡ್ ಲಸಿಕೆ ನೀಡಲಾಗಿದೆ. ಸೋಮವಾರ ಮಾತ್ರ 1,95,554 ಜನರಿಗೆ ನೀಡಲಾಗಿದೆ. 60 ವರ್ಷ ಮೇಲ್ಪಟ್ಟ ಇಪ್ಪತ್ತೆರಡೂವರೆ ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. 45-59 ವರ್ಷ ವಯಸ್ಸಿನ 10.4 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. ದೇಶದಲ್ಲಿ ಲಸಿಕೆ ನೀಡಿಕೆಯಲ್ಲಿ ಕರ್ನಾಟಕ 6 ನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳದ ನಂತರದ ಸ್ಥಾನದಲ್ಲಿ ನಾವಿದ್ದೇವೆ. ಕೇಂದ್ರ ಸರ್ಕಾರ ನಮ್ಮ ಮನವಿ ಸ್ಪಂದಿಸಿ 15 ಲಕ್ಷ ಡೋಸ್ ಲಸಿಕೆಯನ್ನು ಕಳುಹಿಸಿಕೊಟ್ಟಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ದೇಶದಲ್ಲಿ 1 ಲಕ್ಷಕ್ಕೂ ಹೆಚ್ಚು ಸೋಂಕಿತರು ಒಂದೇ ದಿನ ಪತ್ತೆಯಾಗಿದ್ದಾರೆ. ರಾಜ್ಯದಲ್ಲಿ ಸಾವಿನ ಸಂಖ್ಯೆಯೂ ಹೆಚ್ಚುತ್ತಿದ್ದು, ಸೋಮವಾರ ಒಂದೇ ದಿನ 32 ಸಾವಾಗಿದೆ. ಮಧ್ಯವಯಸ್ಕರು, 25 ವರ್ಷದ ಯುವಜನರು ಸಾವಿಗೀಡಾಗಿರುವುದು ಆತಂಕ ಉಂಟುಮಾಡಿದೆ. ಈ ಹಿನ್ನಲೆಯಲ್ಲಿ ಸಾವಿನ ಆಡಿಟ್ ಮಾಡಬೇಕೆಂದು ತಾಂತ್ರಿಕ ಸಲಹಾ ಸಮಿತಿಗೆ ಸೂಚಿಸಲಾಗಿದೆ. ಮೊದಲ ಅಲೆಗೆ ಹೋಲಿಸಿದರೆ ಎರಡನೇ ಅಲೆ ಬೇಗ ಹರಡುತ್ತಿದೆ. ಇದರ ತೀವ್ರತೆ ಕಡಿಮೆ ಇದೆಯೋ ಅಥವಾ ಹೆಚ್ಚಿದೆಯೋ ಎಂದು ಹೇಳಲು ಈಗಲೇ ಸಾಧ್ಯವಿಲ್ಲ. ಆದರೆ ಅದನ್ನು ಎದುರಿಸಲು ಬೇಕಾದ ಸಿದ್ಧತೆಗಳನ್ನು ಮಾಡಲಾಗಿದೆ ಎಂದರು.
ರಾಜ್ಯಾದ್ಯಂತ 33,697 ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗಾಗಿ ಸಿದ್ಧಪಡಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಹಿತ ಹಾಸಿಗೆಗಳ ಸಂಖ್ಯೆ 15,733 ಇದೆ. ಈ ಪೈಕಿ 10,083 ಹಾಸಿಗೆಗಳನ್ನು ಕೋವಿಡ್ ಗೆ ಮೀಸಲಿಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ 20% ಹಾಸಿಗೆ ಮೀಸಲಿಡಲು ಸೂಚಿಸಲಾಗಿದೆ. ಕೋವಿಡ್ ಪ್ರಕರಣ ಹೆಚ್ಚಿದರೆ ಮತ್ತಷ್ಟು ಹಾಸಿಗೆ ಮೀಸಲಿಡಬೇಕಾಗುತ್ತದೆ. ಕೋವಿಡ್ ಯೇತರ ಚಿಕಿತ್ಸೆಗಳು ಕೂಡ ಮುಖ್ಯವಾಗಿದೆ. ಆದ್ದರಿಂದ ಜನರು ಹೆಚ್ಚು ಎಚ್ಚರ ವಹಿಸಬೇಕು ಎಂದರು