ಬೆಳಗಾವಿ: ಭಾರತದ ಯುವಕರಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಸರ್ಕಾರಗಳಿಗೆ ಸವಾಲಾಗಿರುವ ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವ ಮೂಲಕ ರಾಜ್ಯದ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಮಾನವೀಯತೆ ಮೆರೆದಿದ್ದಾರೆ.
ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಈ ಕಾಲದಲ್ಲಿ ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವುದು ತುಂಬಾ ಕಷ್ಟಕರವಾಗಿದೆ. ಹಾಗಾಗಿ ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಎಲ್ಲಾ ಜನಪ್ರತಿನಿಧಿಗಳಿಗೆ ಮತ್ತು ಕಾರ್ಪೊರೇಟ್ ಸಂಸ್ಥೆಗಳಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಚಿವ ರಮೇಶ್ ಜಾರಕಿಹೊಳಿ ಅವರು ಗೋಕಾಕ್ ತಾಲೂಕಿನ ಐದು ಶಾಲೆಗಳನ್ನು ದತ್ತು ಪಡೆದುಕೊಂಡು ಶಿಕ್ಷಣ ಇಲಾಖೆಯ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದಾರೆ.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಗೋಕಾಕ್ ತಾಲ್ಲೂಕಿನಲ್ಲಿರುವ ಖನಗಾಂವ ಗ್ರಾಮದ ಕನ್ನಡ ಪ್ರಾಥಮಿಕ ಶಾಲೆ, ಮಮದಾಪೂರದ ಸರಕಾರಿ ಮಾದರಿ ಗಂಡು ಮಕ್ಕಳ ಶಾಲೆ, ಅಂಕಲಗಿಯ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ, ಧುಪಧಾಳದ ಮತ್ತು ಸುಲಧಾಳ ಗ್ರಾಮದಲ್ಲಿರುವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗಳನ್ನು ದತ್ತು ಪಡೆದುಕೊಂಡಿರುವ ಸಚಿವರು ಈ ಶಾಲೆಗಳ ಸಮಗ್ರ ಅಭಿವೃದ್ಧಿಗೆ ರೂಪು ರೇಷೆ ಸಿದ್ಧಪಡಿಸುವತ್ತ ಗಮನ ಹರಿಸಿದ್ದಾರೆ.
ಏನಿದು ಯೋಜನೆ?
ರಾಜ್ಯದಲ್ಲಿ 43,447 ಸರ್ಕಾರಿ ಪ್ರಾಥಮಿಕ ಶಾಲೆಗಳು ಮತ್ತು 3.029 ಪ್ರೌಢಶಾಲೆಗಳಿದ್ದು, ಶಿಕ್ಷಣ ಇಲಾಖೆಗೆ ವಾರ್ಷಿಕ ನೀಡಲಾಗುವ ಅನುದಾನದಲ್ಲಿ ಶೇ.90ರಷ್ಟು ಶಿಕ್ಷಕರ ಭತ್ಯೆಗೆ ಖರ್ಚಾಗುತ್ತಿದ್ದು, ಇನ್ನುಳಿದ ಶೇ.10ರಷ್ಟು ಅನುದಾನದಲ್ಲಿ ಶಾಲೆಗಳ ಅಭಿವೃದ್ಧಿ ಕಷ್ಟಸಾಧ್ಯ. ಈ ಹಿನ್ನೆಲೆಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಅನುವಾಗುವಂತೆ ರಾಜ್ಯ ಸರ್ಕಾರವು ಶಾಲಾ ದತ್ತು ಯೋಜನೆ ಯನ್ನು ಹೊಂದಿದ್ದು, ಹತ್ತು ಹಲವು ಉದ್ಯಮಿಗಳು ಈಗಾಗಲೇ ಹಲವು ಶಾಲೆಗಳನ್ನು ದತ್ತು ಪಡೆದುಕೊಂಡಿದ್ದಾರೆ.
ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡವರ ಸಹಾಯದಿಂದ ಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿಪಡಿಸುವ ಜತೆ ಜತೆಗೆ ಗುಣಮಟ್ಟದ ಶಿಕ್ಷಣ ನೀಡುವಂತೆ ಮಾಡುವುದು ಸರ್ಕಾರದ ಆಲೋಚನೆ ಆಗಿದ್ದು, ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಹಲವು ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.