ಹರಿಹರ ಬಳಿ ಆಹಾರ ಇಲಾಖೆ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ.. ರಾಣೆಬೆನ್ನೂರಿನಿಂದ ತುಮಕೂರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ಅನ್ನಭಾಗ್ಯ ಅಕ್ಕಿ ವಶ.
ವರದಿ: ಹೆಚ್ ಎಂ ಪಿ ಕುಮಾರ್
ದಾವಣಗೆರೆ: ರಾಣೆಬೆನ್ನೂರಿನಿಂದ ತುಮಕೂರಿಗೆ ತೆರಳುತ್ತಿದ್ದ 15 ಟನ್ ಅನ್ನಭಾಗ್ಯ ಅಕ್ಕಿಯನ್ನು ಸಾಗಿಸುತ್ತಿದ್ದ ಲಾರಿಯನ್ನು ಹರಿಹರ ಬಳಿ ಆಹಾರ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ..
ಇಂದು ಮುಂಜಾನೆಯಿಂದ ಅನ್ನಭಾಗ್ಯ ಅಕ್ಕಿಯನ್ನು ಬೇರೆ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಲಾರಿಗೆ ಲೋಡ್ ಮಾಡಲಾಗಿತ್ತು. ಈ ಲಾರಿ ಹರಿಹರ ದಾವಣಗೆರೆ ಚಿತ್ರದುರ್ಗ ಮೂಲಕ ರಾಣೆಬೆನ್ನೂರಿನಿಂದ ತುಮಕೂರಿಗೆ ಹೋಗುತ್ತಿರುವ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ. ಆಹಾರ ಇಲಾಖೆಯ ಶಿರಸ್ತೇದಾರ ರಮೇಶ್, ಸದರಿ ಲಾರಿಯನ್ನು ಹರಿಹರದ ಬೈಪಾಸ್ ಬಳಿಯಲ್ಲಿ ವಶಕ್ಕೆ ತೆಗೆದುಕೊಳ್ಳಲಾಯಿತು. ಲಾರಿಯಲ್ಲಿ 150 ಕ್ವಿಂಟಲ್ 50 ಕೆ.ಜಿಯ 300 ಪ್ಲಾಸ್ಟಿಕ್ ಬ್ಯಾಗ್‌ಗಳಿದ್ದವು. ಅಕ್ಕಿಯ ಮೌಲ್ಯ 2.50 ಲಕ್ಷ ರೂ. ಅಂದಾಜಿಸಲಾಗಿದೆ. ಈ ಪ್ರಕರಣದಲ್ಲಿ ಲಾರಿ ಚಾಲಕ ಪರಾರಿಯಾಗಿದ್ದು ಲಾರಿಯನ್ನ ವಶಕ್ಕೆ ತೆಗೆದುಕೊಳ್ಳಲಾಗಿದೆ..
ಲಾರಿಯ ಅಸಲಿ ಮಾಲೀಕ ಯಾರು? ಹಾಗೂ ಅನ್ನಭಾಗ್ಯ ಅಕ್ಕಿಯನ್ನು ಯಾರು ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಬಗ್ಗೆ ತನಿಖೆ ಮಾಡಲಾಗುತ್ತೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಾರಿಯಲ್ಲಿದ್ದ ಬಿಲ್ ಹಾಗೂ ಅಕ್ಕಿಯ ಪ್ರಮಾಣದಲ್ಲಿ ತುಂಬಾ ವ್ಯತ್ಯಾಸವಿದ್ದ ಕಾರಣ ಅನುಮಾನಗೊಂಡು ಅಧಿಕಾರಿಗಳು ಪರಿಶೀಲನೆ ಆರಂಭಿಸುವಷ್ಟರಲ್ಲೇ ಲಾರಿ ಚಾಲಕ ಪರಾರಿಯಾಗಿದ್ದಾನೆ. ಪೊಲಿಸ್ ಸಹಾಯದಿಂದ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಗೆ ಲಾರಿಯನ್ನು ಕೊಂಡೊಯ್ದು ಪ್ರಕರಣ ದಾಖಲು ಮಾಡಲಾಗಿದೆ ಎಂದು ಅಧಿಕಾರಿ ರಮೇಶ್ ತಿಳಿಸಿದ್ದಾರೆ.