ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಈ ವರೆಗೂ ವಾಗ್ಬಾಣ ಪ್ರಯೋಗಿಸುತ್ತಾ ಸಂಚಲನ ಸೃಷ್ಟಿಸುತ್ತಿದ್ದ ಕೇಸರಿ ಪಡೆಯ ಬೆಂಕಿ ಚೆಂಡು ಖ್ಯಾತಿಯ ಯತ್ನಾಳ್ ಇದೀಗ ತಣ್ಣಗಾಗಿದ್ದಾರೆ. ಕಾಕತಾಳೀಯ ಎಂಬಂತೆ ಬಿಜೆಪಿಯಲ್ಲಿನ ಇತ್ತೀಚಿನ ಬೆಳವಣಿಗೆ ಬಗ್ಗೆ ಕಮಲ ನಾಯಕರು ಬೇಸರದಲ್ಲಿದ್ದು ಬಹುಶಃ ಶಾಸಕ ಬಸನಗೌಡ ಯತ್ನಾಳ್ ನಡೆ ಕೂಡಾ ಅಚ್ಚರಿಗೆ ಕಾರಣವಾಗಿದೆ.
ಇತ್ತೀಚಿನವರೆಗೂ ಸಿಎಂ ಯಡಿಯೂರಪ್ಪ ಹಾಗೂ ಕುಟುಂಬ ಸದಸ್ಯರ ವಿರುದ್ಧ ಬಾಂಬ್ ಸಿಡಿಸುತ್ತಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಬಿಎಸ್‌ವೈ ವಿಧಾನಸೌಶದಲ್ಲಿಂದು ಅಚ್ಚರಿಯ ಸನ್ನಿವೇಶಕ್ಕೆ ಸಾಕ್ಷಿಯಾದರು. ವಿಧಾನಸೌಧದ ಮೊಗಸಾಲೆಯಲ್ಲಿ ಈ ಇಬ್ಬರೂ ನಾಯಕರು ಅಚಾನಕ್ಕಾಗಿ ಮುಖಾಮುಖಿಯಾದರು. ಅದು ವಿಧಾನಸಭೆ ಕಲಾಪ ಮುಂದೂಡಿದ ಸಂದರ್ಭ. ಆ ವೇಳೆ ಮುಖಾಮುಖಿಯಾದಾಗ ಯಡಿಯೂರಪ್ಪ ಅವರು ಯತ್ನಾಳ್ ಅವರನ್ನು ನಸುನಗುತ್ತಲೇ ವಿಶ್ ಮಾಡಿದರು. ಯತ್ನಾಳ್ ಕೂಡಾ ನಗುತ್ತಲೇ ಸಿಎಂಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಯತ್ನಾಳರ ಬೆನ್ನು ತಟ್ಟಿದ ಮಾತನಾಡಿಸಿದ ಬಿಎಸ್‌ವೈ, ಏನು ಮಾಡಬೇಕು ಹೇಳು ಮಾಡ್ತೀನಿ ಎಂದು ಹೇಳಿದಾಗ, ನೀವು ಮನಸು ಮಾಡಿದರೆ ಆಗುತ್ತದೆ ಎಂದು ಯತ್ನಾಳ್ ನುಡಿದರು.
“ನಾವು ಕುಳಿತು ಮಾತನಾಡೋಣ. ಪಂಚಮಸಾಲಿ ಮೀಸಲಾತಿ ಬಗ್ಗೆಯೂ ಕುಳಿತು ಚರ್ಚೆ ಮಾಡೋಣ ಎಂದು ಸಿಎಂ ಹೇಳಿದಾಗ ಅದಕ್ಕೆ ಯತ್ನಾಳ್ ಕೂಡಾ ಅಹಮತ ವ್ಯಕ್ತಪಡಿಸಿದರು.
ಇದು ಕೆಲವೇ ನಿಮಿಷಗಳ ಸನ್ನಿವೇಶವಾಗಿತ್ತು. ರಾಜತಾಂತ್ರಿಕ ವ್ಯವಸ್ಥೆಯಲ್ಲಿ ಈ ರೀತಿಯ ಪ್ರಸಂಗಗಳೂ ಸಾಮಾನ್ಯ. ಆದರೆ ಇಲ್ಲಿ ಯತ್ನಾಳ್ ಮತ್ತು ಬಿಎಸ್‌ವೈ ಮುಖಾಮುಖಿಯಾದಾಗ ಅವರಿಬ್ಬರ ನಡುವೆ ಭಾವನಾತ್ಮಕ ನಂಟು, ದೂರವಾಗದ ಸ್ನೇಹದ ಸೆಳೆತವಿತ್ತು ಎಂಬುದು ಪ್ರತಿಬಿಂಬಿಸಿದಂತಿತ್ತು.