ಕಲಬುರಗಿ,ಜು.24- ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದರೂ ಪ್ರವಾಹದಿಂದ ಮುಳುಗುವ ಹಳ್ಳಿಗಳನ್ನು ಸ್ಥಳಾಂತರ ಮಾಡಲಾಗುವುದು. ಜನ ಮತ್ತು ಜಾನುವಾರು ರಕ್ಷಣೆಗೆ ಜಿಲ್ಲಾಡಳಿತ ಎಲ್ಲ ರೀತಿಯಲ್ಲೂ ಪರಿಹಾರ ಕಾರ್ಯ ಕೈಗೊಳ್ಳಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಅವರು ಸಾರ್ವಜನಿಕರಿಗೆ ಅಭಯ ನೀಡಿದರು.
ನಗರದ ಐವಾನ್-ಈ-ಶಾಹಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಜಿಲ್ಲಾಧಿಕಾರಿಗಳು ಮಹಾರಾಷ್ಟ್ರದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ತಗ್ಗುಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುವ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಜಿಲ್ಲೆಯಾದ್ಯಂತ ಇನ್ನು ಮೂರು ದಿನ ಹೆಚ್ಚಿನ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಯವಿಟ್ಟು ಸಾರ್ವಜನಿಕರು ತಗ್ಗುಪ್ರದೇಶ ಇಲ್ಲವೇ ನದಿಪಾತ್ರಗಳಲ್ಲಿದ್ದರೆ ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ನಿರಾಣಿ ಅವರು ಮನವಿ ಮಾಡಿದರು.
ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದ್ದುಘಿ, ಅಣೆಕಟ್ಟು, ನದಿ, ಹಳ್ಳಕೊಳ್ಳಗಳು ಭರ್ತಿಯಾಗುತ್ತಿವೆ. ಕೃಷ್ಣ, ಭೀಮಾ ಮತ್ತು ಆಲಮಟ್ಟಿ ಅಣೆಕಟ್ಟುಗಳಲ್ಲಿ ಒಳಹರಿವು ಹೆಚ್ಚಾಗಿದೆ. ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಆಚೆ ಬರಬಾರದು. ಈಗಾಗಲೇ ನಾವು ಸಮಾರೋಪಾದಿಯಲ್ಲಿ ಪರಿಹಾರ ಕಾರ್ಯವನ್ನು ಕೈಗೊಂಡಿದ್ದೇವೆ. ಯಾರೊಬ್ಬರೂ ಆತಂಕ ಪಡಬೇಡಿ ಎಂದು ಸಲಹೆ ಮಾಡಿದರು.