ಬೆಂಗಳೂರು: ಗೃಹಸಚಿವರಿಂದಲೇ ಸಂಚಾರ ನಿಯಮ ಉಲ್ಲಂಘನೆ..? ಟ್ರಾಫಿಕ್ ಫೈನ್ ಬಾಕಿ ಉಳಿಸಿಕೊಂಡಿದ್ದಾರೆಯೇ ಗೃಹಸಚಿವ ಪ್ರಿಯಾಂಕ ಖರ್ಗೆ? ಈ ಕುರಿತಂತೆ ಪ್ರತಿಪಕ್ಷ ಬಿಜೆಪಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಪೋಸ್ಟ್ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಅಧಿಕೃತ ವಾಹನದ ವಿರುದ್ಧ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, ದಂಡ ಬಾಕಿ ಉಳಿದಿದೆ ಎಂದು ಬಿಜೆಪಿ ಆರೋಪಿಸಿದೆ.
ರಾಜ್ಯ ಸರ್ಕಾರವು ಜೂನ್ 21ರಿಂದ ಜುಲೈ 10ರವರೆಗೆ ಬಾಕಿ ಇರುವ ಇ-ಚಲನ್ ದಂಡಗಳ ಮೇಲೆ ಶೇ.50 ರಿಯಾಯಿತಿ ಘೋಷಿಸಿದ ಬೆನ್ನಲ್ಲೇ ಈ ವಿಚಾರ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಪ್ರಿಯಾಂಕ್ ಖರ್ಗೆ ಅವರಿಗೆ ತಿರುಗೇಟು ನೀಡಿರುವ ಬಿಜೆಪಿ, “ಸಂಚಾರ ನಿಯಮ ಪಾಲನೆ ಕುರಿತು ಜಾಗೃತಿ ಮೂಡಿಸುವ ಗೃಹ ಸಚಿವರ ವಾಹನವೇ ನಿಯಮ ಉಲ್ಲಂಘಿಸಿದೆ” ಎಂದು ವ್ಯಂಗ್ಯವಾಡಿದೆ.

ಬಿಜೆಪಿ ಕರ್ನಾಟಕ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಸಚಿವರ ಅಧಿಕೃತ ವಾಹನ ಎಂದು ಹೇಳಲಾದ KA42 GA 0099 ಸಂಖ್ಯೆಯ ಕಾರಿನ ವಿರುದ್ಧ ನಾಲ್ಕು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ವಾಹನವು ನಿಗದಿತ ವೇಗ ಮೀರಿಸಿ ಚಲಿಸಿದ್ದು ಹಾಗೂ ಸೀಟ್‌ಬೆಲ್ಟ್ ಧರಿಸದಿರುವುದು ಸೇರಿದಂತೆ ವಿವಿಧ ಉಲ್ಲಂಘನೆಗಳು ಸಂಚಾರ ಪೊಲೀಸ್ ಕ್ಯಾಮೆರಾಗಳಲ್ಲಿ ದಾಖಲಾಗಿವೆ ಎಂದು ಬಿಜೆಪಿ ಹೇಳಿದೆ.
ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ₹2,500 ದಂಡ ಪಾವತಿಸಬೇಕಿದ್ದು, ಅದು ಇನ್ನೂ ಬಾಕಿಯಾಗಿದೆ ಎಂದು ಬಿಜೆಪಿ ಆರೋಪಿಸಿದೆ.
“ಸಂಚಾರ ನಿಯಮಗಳು ಕೇವಲ ರಸ್ತೆಯ ಮೇಲಿನ ಗೆರೆಗಳಲ್ಲ, ಅವು ಜನರ ಸುರಕ್ಷತೆಗೆ ಸಂಬಂಧಿಸಿದವು. ಸರ್ಕಾರ ಜನರಿಗೆ ನಿಯಮ ಪಾಲನೆ ಕುರಿತು ಬೋಧನೆ ಮಾಡುವಾಗ, ಸಚಿವರ ವಾಹನವೇ ನಿಯಮ ಉಲ್ಲಂಘಿಸಿರುವುದು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ” ಎಂದು ಬಿಜೆಪಿ ಪೋಸ್ಟ್‌ನಲ್ಲಿ ಟೀಕಿಸಿದೆ.
We completely agree with you, @PriyankKharge avare! Traffic rules truly are lifelines for everyone sharing the road.
BUT… do seatbelts and speed limits simply not apply to YOU, Mr. Kharge? Your vehicle, KA42 GA 0099, has been caught speeding and ignoring basic safety rules!… https://t.co/L8Smp6MUrF pic.twitter.com/LRh2WfcNks
— BJP Karnataka (@BJP4Karnataka) June 24, 2026
ಆದರೆ, ಈ ಆರೋಪಗಳಿಗೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅಥವಾ ಅವರ ಕಚೇರಿಯಿಂದ ಇನ್ನೂ ಅಧಿಕೃತ ಪ್ರತಿಕ್ರಿಯೆ ಪ್ರಕಟವಾಗಿಲ್ಲ







































































