ಬೀದರ್: ಎಲ್ಲೇ ಹೋದರು ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಪ್ರಧಾನಿ ನರೇಂದ್ರ ಮೋದಿಯವರು, ರಾಜ್ಯದ ಗುತ್ತಿಗೆದಾರರ ಸಂಘದವರು ರಾಜ್ಯದಲ್ಲಿ 40% ಕಮಿಷನ್ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಪತ್ರ ಬರೆದರೆ ಅದಕ್ಕೆ ಯಾವುದೇ ಉತ್ತರ ನೀಡಿಲ್ಲ ಎಂದು ಎಐಸಿಸಿ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಬೀದರ್ ಜಿಲ್ಲೆಯ ಹುಮ್ನಾಬಾದ್‌ನಲ್ಲಿ ಕಾಂಗ್ರೆಸ್ ಆಯೋಜಿಸಿದ ಕಾರ್ಯಾಕ್ರಮ ಪಕ್ಷದ ಶಕ್ತಿಪ್ರದರ್ಶನಕ್ಕೆ ಸಾಕ್ಷಿಯಾಯಿತು. ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿಯನ್ನು ಕೇವಲ ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ 40% ಸರ್ಕಾರ ಎಂದು ಕರೆಯುತ್ತಾರೆ. ಈ ಬಿರುದು ಕೊಟ್ಟಿದ್ದು ನಾನಲ್ಲ. ರಾಜ್ಯದ ಜನ ಕೊಟ್ಟಿದ್ದಾರೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ರಾಜ್ಯದ ಜನರು ಕಣ್ಣಾರೆ ಕಂಡಿದ್ದಾರೆ ಎಂದರು. ಪ್ರಧಾನಿ ಮೋದಿ ಅವರು ಎಲ್ಲೇ ಹೋದರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ರಾಜ್ಯದ ಗುತ್ತಿಗೆದಾರರ ಸಂಘದವರು ರಾಜ್ಯದಲ್ಲಿ 40% ಕಮಿಷನ್ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಪತ್ರ ಬರೆದರೆ ಅದಕ್ಕೆ ಯಾವುದೇ ಉತ್ತರವಿಲ್ಲ. ಇನ್ನು ಮೈಸೂರು ಸ್ಯಾಂಡಲ್ ಸೋಪ್ ಸಂಸ್ಥೆಯಲ್ಲಿ ನಡೆದಿರುವ ಅಕ್ರಮದಲ್ಲಿ ಬಿಜೆಪಿ ಶಾಸಕರ ಪುತ್ರ 8 ಕೋಟಿ ಲೂಟಿ ವೇಳೆ ಸಿಕ್ಕಿಬಿದಿದ್ದಾರೆ. ಈ ಬಗ್ಗೆ ಮೋದಿ ಮೌನವಾಗಿದ್ದಾರೆ. ನೇಮಕಾತಿ ಹಗರಣವಾದಾಗ ಸರ್ಕಾರ ಒಂದೇ ಒಂದು ಮಾತನಾಡಲಿಲ್ಲ. ಪಿಎಸ್ಐ, ಸಹಾಯಕ ಪ್ರಾಧ್ಯಾಪಕರು, ಜೆಇಇ ನೇಮಕಾತಿ ಅಕ್ರಮದ ಬಗ್ಗೆ ಮಾತನಾಡಲಿಲ್ಲ ಎಂದು ಟೀಕಿಸಿದರು.
ಬಿಜೆಪಿ ಹಾಗೂ ಆರ್ ಎಸ್ಎಸ್ ಅವರ ವಿಚಾರಧಾರೆ ಬಸವಣ್ಣನವರ ವಿಚಾರಧಾರೆಗೆ ವಿರುದ್ಧವಾಗಿದೆ. ಈ ವಿರೋಧವಾಗಿ ಇವರು ಕೆಲಸ ಮಾಡುತ್ತಿದ್ದಾರೆ. ಕೆಲ ದಿನಗಳಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಈ ಬಾರಿ ಕಾಂಗ್ರೆಸ್ 150 ಕ್ಷೇತ್ರಗಳ ಪ್ರಚಂಡ ಗೆಲುವು ಸಾಧಿಸಲಿದೆ ಎಂಬುದು ಎಲ್ಲರಿಗೂ ತಿಳಿದಿದೆ. 40% ಕಮಿಷನ್ ಸರ್ಕಾರಕ್ಕೆ 40ಕ್ಕಿಂತ ಹೆಚ್ಚು ಕ್ಷೇತ್ರ ಸಿಗುವುದಿಲ್ಲ ಎಂದವರು ಭವಿಷ್ಯ ನುಡಿದರು.
ನಾನು ಸಂಸತ್ತಿನಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾ ಅದಾನಿ ಅವರ ಜತೆಗಿನ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದೆ. ಅದಕ್ಕೆ ಅವರು ನನ್ನ ಮೈಕ್ ಆಫ್ ಮಾಡಿ ನನ್ನನ್ನು ಸಂಸತ್ತಿನಿಂದ ಅನರ್ಹರನ್ನಾಗಿ ಮಾಡಿದರು. ಲೋಕಸಭೆಯಿಂದ ಹೊರಹಾಕಿದರು. ಕಾರಣ ನಾನು ಭ್ರಷ್ಟಾಚಾರದ ಬಗ್ಗೆ ಮೋದಿ ಅವರನ್ನು ಪ್ರಶ್ನಿಸಿದ್ದೆ. ಮೋದಿ ಹಾಗೂ ಅದಾನಿ ಅವರ ನಡುವಣ ಸಂಬಂಧವೇನು? ಕೇಳಿದೆ. ಬಿಜೆಪಿಯವರ ಈ ದಬ್ಬಾಳಿಕೆಗೆ ನಾನು ಹೆದರುವುದಿಲ್ಲ. ಕರ್ನಾಟಕ ರಾಜ್ಯದ ಜನರೂ ಹೆದರುವುದಿಲ್ಲ. ರಾಜ್ಯದ ಜನ ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. 40% ಕಮಿಷನ್ ಹಣ ನಿಮ್ಮ ಹಣ. ಈ ಹಣವನ್ನು ನಿಮ್ಮ ಆರೋಗ್ಯ, ಶಿಕ್ಷಣಕ್ಕೆ ಮೀಸಲಿಡಬೇಕು. ಕಳೆದ ಬಾರಿ ನೀವು ಬಿಜೆಪಿ ಸರ್ಕಾರಕ್ಕೆ ಅಧಿಕಾರ ನೀಡಿರಲಿಲ್ಲ. ಆದರೂ ಅವರು ಅಧಿಕಾರಕ್ಕೆ ಬಂದರು. ಬಿಜೆಪಿಯವರು ಭ್ರಷ್ಟಾಚಾರದ ಹಣದಲ್ಲಿ ಮೈತ್ರಿ ಸರ್ಕಾರ ಬೀಳಿಸಿ, 40% ಕಮಿಷನ್ ಲೂಟಿ ಮಾಡಿದರು. ಈ ಬಾರಿಯೂ ಈ ಲೂಟಿ ಹಣದಲ್ಲಿ ಸರ್ಕಾರವನ್ನು ಬೀಳಿಸಲು ಪ್ರಯತ್ನಿಸಲಿದ್ದಾರೆ. ಹೀಗಾಗಿ ನೀವು ಕಾಂಗ್ರೆಸ್ ಪಕ್ಷವನ್ನು 150 ಕ್ಷೇತ್ರಗಳಲ್ಲಿ ಗೆಲ್ಲಿಸಲೇಬೇಕು. ಇಲ್ಲದಿದ್ದರೆ ಮತ್ತೆ ಸರ್ಕಾರ ಬೀಳಿಸಲು ಪ್ರಯತ್ನಿಸುತ್ತಾರೆ. ಬಿಜೆಪಿಗೆ 40 ಕ್ಕಿಂತ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲು ಬಿಡಬಾರದು ಎಂದರು.
ಮೋದಿ ಅವರು ನಾನು ಒಬಿಸಿ ಸಮುದಾಯಕ್ಕೆ ಅಪಮಾನ ಮಾಡಿದ್ದೇನೆ ಎಂದು ಹೇಳಿದ್ದಾರೆ. ನಾನು ಎಂದೂ ಯಾರಿಗೂ ಅಪಮಾನ ಮಾಡುವುದಿಲ್ಲ. ನರೇಂದ್ರ ಮೋದಿ ಅವರಿಗೆ ಒಬಿಸಿ ಸಮುದಾಯಗಳ ಬಗ್ಗೆ ಕಾಳಜಿ ಇದ್ದರೆ, ಈ ಸಮುದಾಯಗಳಿಗೆ ರಾಜಕೀಯ, ಆರ್ಥಿಕ ಶಕ್ತಿ ತುಂಬಲಿ. ಹೀಗಾಗಿ ಶೇ.50ರಷ್ಟು ನಿಗದಿ ಮಾಡಿರುವ ಮೀಸಲಾತಿ ಮಿತಿಯನ್ನು ತೆರವುಗೊಳಿಸಲಿ. ಒಬಿಸಿ ಸಮುದಾಯಗಳಿಗೆ ಶಕ್ತಿ ತುಂಬಬೇಕಾದರೆ, ಒಬಿಸಿ, ದಲಿತರು, ಆದಿವಾಸಿಗಳು ಎಷ್ಟು ಜನ ಇದ್ದಾರೆ ಎಂದು ತಿಳಿಯಬೇಕು ಎಂದ ರಾಹುಲ್ ಗಾಂಧಿ, ಯುಪಿಎ ಸರ್ಕಾರ 2011ರಲ್ಲಿ ಜಾತಿ ಗಣತಿ ಮಾಡಿಸಿದ್ದು, ಅದರ ಪ್ರಕಾರ ದೇಶದಲ್ಲಿ ಹಿಂದುಳಿದ ವರ್ಗಗಳು ಹಾಗೂ ದಲಿತರ ಜನಸಂಖ್ಯೆ ಎಷ್ಟಿದೆ? ಎಂದು ಬಹಿರಂಗಪಡಿಸಲಿ. ಮೋದಿ ಸರ್ಕಾರ ಈ ಅಂಕಿ ಅಂಶಗಳನ್ನು ಯಾರಿಗೂ ನೀಡುತ್ತಿಲ್ಲ. ಜತೆಗೆ ಅದರ ಅನುಗುಣವಾಗಿ ಸರ್ಕಾರದ ಕಾರ್ಯದರ್ಶಿಗಳ ಮಟ್ಟದಲ್ಲಿ ಆಯಾ ಸಮುದಾಯಗಳಿಗೆ ಅಧಿಕಾರ ನೀಡಲಿ. ಇಲ್ಲದಿದ್ದರೆ ಈ ಸರ್ಕಾರ ಹಿಂದುಳಿದ ಹಾಗೂ ದಲಿತ ಸಮುದಾಯಗಳಿಗೆ ದ್ರೋಹ ಮಾಡಿದಂತೆ. ಬಿಜೆಪಿ ಸರ್ಕಾರ ಈ ಕೆಲಸ ಮಾಡದಿದ್ದರೆ ಕಾಂಗ್ರೆಸ್ ಸರ್ಕಾರ ಈ ಕೆಲಸ ಮಾಡಲಿದೆ. ನಾವು ಒಬಿಸಿ, ದಲಿತರು, ಆದಿವಾಸಿಗಳಿಗೆ ಶಕ್ತಿ ತುಂಬಲಿದೆ ಎಂದರು.