ನವದೆಹಲಿ: ದೇಶದ ಹಣದುಬ್ಬರ ಹಾಗೂ ಬೆಲೆ ಏರಿಳಿತದ ಅಳತೆಯನ್ನು ಮತ್ತಷ್ಟು ನಿಖರಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಸಗಟು ಬೆಲೆ ಸೂಚ್ಯಂಕದ (ಡಬ್ಲ್ಯುಪಿಐ) ಮೂಲ ವರ್ಷವನ್ನು 2011-12ರಿಂದ 2022-23ಕ್ಕೆ ಪರಿಷ್ಕರಿಸಲು ಅನುಮೋದನೆ ನೀಡಿದೆ. ಜೊತೆಗೆ, ಹೊಸ ಉತ್ಪಾದಕ ಬೆಲೆ ಸೂಚ್ಯಂಕಗಳನ್ನು (ಪಿಪಿಐ) ಪರಿಚಯಿಸುವುದಾಗಿ ಘೋಷಿಸಿದೆ.
ಪರಿಷ್ಕೃತ ಡಬ್ಲ್ಯುಪಿಐ ಸರಣಿ ಹಾಗೂ ಹೊಸ ಉತ್ಪಾದಕ ಬೆಲೆ ಸೂಚ್ಯಂಕಗಳನ್ನು ಜೂನ್ 15ರಂದು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ ಅಧೀನದಲ್ಲಿರುವ ಆರ್ಥಿಕ ಸಲಹೆಗಾರರ ಕಚೇರಿ ಬಿಡುಗಡೆ ಮಾಡಲಿದೆ.
ಹೊಸ ಡಬ್ಲ್ಯುಪಿಐ ಸರಣಿಯು ಪ್ರಸ್ತುತ ಜಾರಿಯಲ್ಲಿರುವ 2011-12ರ ಮೂಲ ವರ್ಷದ ಸೂಚ್ಯಂಕವನ್ನು ಬದಲಾಯಿಸಲಿದ್ದು, ವ್ಯಾಪಕ ವ್ಯಾಪ್ತಿ, ನವೀಕೃತ ವಿಧಾನ ಮತ್ತು ಹೆಚ್ಚು ಪ್ರಾತಿನಿಧಿಕ ಸರಕುಗಳ ಪಟ್ಟಿಯನ್ನು ಒಳಗೊಂಡಿರಲಿದೆ. ಸೂಚ್ಯಂಕದಲ್ಲಿ ಒಳಗೊಂಡಿರುವ ವಸ್ತುಗಳ ಸಂಖ್ಯೆ 697ರಿಂದ 957ಕ್ಕೆ ಏರಿಕೆಯಾಗಿದೆ.
ಈ ಪರಿಷ್ಕರಣೆಯ ಪ್ರಮುಖ ಅಂಶವೆಂದರೆ ಸೌರ ಮತ್ತು ಪವನ ವಿದ್ಯುತ್ ಸೇರಿದಂತೆ ನವೀಕರಿಸಬಹುದಾದ ಇಂಧನ ಮೂಲಗಳನ್ನು ವಿದ್ಯುತ್ ವಿಭಾಗದ ಅಡಿಯಲ್ಲಿ ಸೇರಿಸಲಾಗಿದೆ. ಅಲ್ಲದೆ, ಕಚ್ಚಾ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲವನ್ನು ಇಂಧನ ಮತ್ತು ವಿದ್ಯುತ್ ಗುಂಪಿಗೆ ವರ್ಗಾಯಿಸುವ ಮೂಲಕ ಇಂಧನ ಬೆಲೆಗಳ ಚಲನವಲನವನ್ನು ಹೆಚ್ಚು ಪರಿಣಾಮಕಾರಿಯಾಗಿ ಅಳೆಯಲು ಅವಕಾಶ ಕಲ್ಪಿಸಲಾಗಿದೆ.
ಇದರೊಂದಿಗೆ ಸರ್ಕಾರವು ಔಟ್ಪುಟ್ ಉತ್ಪಾದಕ ಬೆಲೆ ಸೂಚ್ಯಂಕ, ಇನ್ಪುಟ್ ಉತ್ಪಾದಕ ಬೆಲೆ ಸೂಚ್ಯಂಕ ಹಾಗೂ ಸೇವಾ ಉತ್ಪಾದಕ ಬೆಲೆ ಸೂಚ್ಯಂಕಗಳನ್ನು ಸಹ ಪರಿಚಯಿಸುತ್ತಿದೆ. ಬ್ಯಾಂಕಿಂಗ್, ವಿಮೆ, ರೈಲ್ವೆ, ದೂರಸಂಪರ್ಕ ಮತ್ತು ವಿಮಾನ ಪ್ರಯಾಣಿಕ ಸೇವೆಗಳಂತಹ ಪ್ರಮುಖ ಸೇವಾ ವಲಯಗಳು ಈ ಹೊಸ ಸೂಚ್ಯಂಕಗಳ ವ್ಯಾಪ್ತಿಗೆ ಬರಲಿವೆ.
ಹೊಸ ವ್ಯವಸ್ಥೆಗೆ ಸುಗಮ ಪರಿವರ್ತನೆ ಕಲ್ಪಿಸುವ ಉದ್ದೇಶದಿಂದ ಮುಂದಿನ ಐದು ವರ್ಷಗಳವರೆಗೆ ಡಬ್ಲ್ಯುಪಿಐ ಮತ್ತು ಪಿಪಿಐಗಳನ್ನು ಸಮಾನಾಂತರವಾಗಿ ಪ್ರಕಟಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕ್ರಮವು ಅಂತರರಾಷ್ಟ್ರೀಯ ಹಣಕಾಸು ನಿಧಿ ಸೇರಿದಂತೆ ಜಾಗತಿಕ ಸಂಸ್ಥೆಗಳ ಶಿಫಾರಸುಗಳು ಹಾಗೂ ಅಂತರರಾಷ್ಟ್ರೀಯ ಮಟ್ಟದ ಅತ್ಯುತ್ತಮ ಪದ್ಧತಿಗಳಿಗೆ ಹೊಂದಾಣಿಕೆಯಾಗಿದ್ದು, ಆರ್ಥಿಕತೆಯ ವಿವಿಧ ವಲಯಗಳಲ್ಲಿ ಹಣದುಬ್ಬರದ ಪ್ರವೃತ್ತಿ ಮತ್ತು ಉತ್ಪಾದಕ ಮಟ್ಟದ ಬೆಲೆ ಬದಲಾವಣೆಗಳ ಕುರಿತು ಹೆಚ್ಚು ನಿಖರವಾದ ಚಿತ್ರಣ ನೀಡುವ ನಿರೀಕ್ಷೆಯಿದೆ.



























































