ಬೆಂಗಳೂರು: ವಿದ್ಯಾರ್ಥಿಗಳು ಒತ್ತಡಮುಕ್ತವಾಗಿ ಪರೀಕ್ಷೆಗಳನ್ನು ಎದುರಿಸುವ ಸಲುವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿದ್ಯಾರ್ಥಿ, ಶಿಕ್ಷಕರು ಹಾಗೂ ಪೋಷಕರೊಂದಿಗೆ ನೇರ ಸಂವಾದ ಮಾಡುವ ‘ಪರೀಕ್ಷಾ ಪೆ ಚರ್ಚಾ’ ವಿಶೇಷ ಕಾರ್ಯಕ್ರಮವನ್ನು ಎಪ್ರಿಲ್ 1, 2022 ರಂದು ನವದೆಹಲಿಯ ತಲ್ಕಟೋರಾ ಕ್ರೀಡಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಕೆಲವು ಶಾಲೆಗಳಿಂದ ಆಯ್ದ ವಿದ್ಯಾರ್ಥಿಗಳಿಗೆ ರಾಜಭವನದಲ್ಲಿ ಘನತೆವೆತ್ತ ರಾಜ್ಯಪಾಲರೊಡನೆ ವರ್ಚುಯಲ್ ವೇದಿಕೆ ಮೂಲಕ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರು ತಿಳಿಸಿದರು.
ತಮ್ಮ ಕಚೇರಿ ಸಭಾಂಗಣದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಕೇಂದ್ರ ಶಿಕ್ಷಣ ಇಲಾಖೆಯ ಶಿಕ್ಷಣ ಮತ್ತು ಸಾಕ್ಷರತೆ ವಿಭಾಗವು ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ವಿಶ್ವದಾದ್ಯಂತ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಈ ಸಂವಾದದಲ್ಲಿ ಪಾಲ್ಗೊಳ್ಳುವ ವ್ಯವಸ್ಥೆ ಮಾಡಲಾಗಿದೆ ಎಂದರು. ಈ ನೇರ ಕಾರ್ಯಕ್ರಮವನ್ನು ಸಾರ್ವಜನಿಕರು, ವಿದ್ಯಾರ್ಥಿಗಳು ತಪ್ಪದೇ ವೀಕ್ಷಿಸಿ ಇದರ ಲಾಭ ಪಡೆದುಕೊಳ್ಳಬೇಕು ಎಂದು ಅವರು ಕರೆ ಕೊಟ್ಟರು.
ಕೇಂದ್ರ ಶಿಕ್ಷಣ ಸಚಿವಾಲಯದಿಂದ ಈ ಸಂವಾದದ ನೇರ ಪ್ರಸಾರವನ್ನು ಭಾರತದಲ್ಲಷ್ಟೇ ಅಲ್ಲದೇ ವಿಶ್ವದ ವಿವಿಧ ಭಾಗಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸಹ ವೀಕ್ಷಿಸಲು ಅಗತ್ಯ ಕ್ರಮ ತೆಗೆದುಕೊಂಡಿರುವುದಾಗಿ ತಿಳಿಸಿದರು. ಈ ಬಗ್ಗೆ ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರು ಇತ್ತೀಚಿಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ ಎಂದವರು ತಿಳಿಸಿದರು.
ಕೇಂದ್ರ ಸಚಿವರು ತಿಳಿಸಿರುವಂತೆ, ದೇಶವು ಕೋವಿಡ್ -19 ನಂತಹ ಜಾಗತಿಕ ಬಿಕ್ಕಟ್ಟಿನಿಂದ ಹೊರಬರುತ್ತಿರುವ ಸನ್ನಿವೇಶದಲ್ಲಿ ಪರೀಕ್ಷೆಗಳನ್ನು ಎದುರಿಸಲು ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಯುವ ಜನತೆಗೆ ಒತ್ತಡ ರಹಿತ ವಾತಾವರಣ ನಿರ್ಮಿಸಲು ‘ಪರೀಕ್ಷಾ ಯೋಧರು’ ಅಭಿಯಾನವನ್ನು ಪಧಾನ ಮಂತ್ರಿಗಳ ನೇತೃತ್ವದಲ್ಲಿ ಕೈಗೆತ್ತಿಕೊಳ್ಳಲಾಗಿದೆ .
Mygov ವೇದಿಕೆ ಮೂಲಕ ಡಿಸೆಂಬರ್ 28, 2021 ರಿಂದ ಫೆಬ್ರವರಿ 3, 2022 ರವರೆಗೆ ವಿದ್ಯಾರ್ಥಿಗಳ ಆತಂಕದ ಬಗೆಗಿನ ಪ್ರಬಂಧ ಸ್ವರ್ಧೆಯಲ್ಲಿ 15.7 ಲಕ್ಷ ಸ್ವರ್ಧಾಳುಗಳು ಭಾಗವಹಿಸಿದ್ದು, ಅದರಲ್ಲಿ ಕರ್ನಾಟಕದಿಂದ ಒಟ್ಟು 84 ಜನ ಆಯ್ಕೆಯಾಗಿದ್ದು, ಅವರಲ್ಲಿ 60 ವಿದ್ಯಾರ್ಥಿಗಳು, 12 ಪೋಷಕರು ಹಾಗೂ 12 ಶಿಕ್ಷಕರು ಇದ್ದಾರೆ ಎಂಬ ಮಾಹಿತಿ ಬಂದಿದೆ ಎಂದು ಪ್ರೆಸ್ ಇನ್ ಫರ್ಮೇಷನ್ ಬ್ಯೂರೋ ಉಪನಿರ್ದೇಶಕಿ ಜಯಂತಿ ಅವರು ತಿಳಿಸಿದರು.
ಕಳೆದ ನಾಲ್ಕು ವರ್ಷಗಳಿಂದ ಕೇಂದ್ರ ಶಿಕ್ಷಣ ಇಲಾಖೆಯ ಶಾಲಾ ಶಿಕ್ಷಣ ಮತ್ತು ಸಾಕ್ಷಾರತೆ ವಿಭಾಗದಿಂದ ಯಶಸ್ವಿಯಾಗಿ ಮೊದಲ ಮೂರು ಕಾರ್ಯಕ್ರಮಗಳನ್ನು ನವದೆಹಲಿಯಲ್ಲಿ ಪುರ-ಸಭಾ ಸಂವಾದಾತ್ಮಕ ಮಾದರಿಯಲ್ಲಿ ನಡೆಸಲಾಗಿದ್ದು, ನಾಲ್ಕನೇ ಆವೃತ್ತಿಯ ಕಾರ್ಯಕ್ರಮವನ್ನು ಕೋವಿಡ್ ನಿರ್ಬಂಧದ ಕಾರಣ ಆನ್ ಲೈನ್ ವೇದಿಕೆಯಲ್ಲಿ ಏಪ್ರಿಲ್ 7 2021 ರಂದು ನಡೆಸಲಾಗಿತ್ತು.
ಪ್ರಸ್ತುತ ಈ ಕಾರ್ಯಕ್ರಮದ ಐದನೇ ಆವೃತ್ತಿಯ ನೇರ ಪ್ರಸಾರವನ್ನು ಏಪ್ರಿಲ್ 1ರಂದು, ದೂರದರ್ಶನದ ಡಿಡಿ ನ್ಯಾಷನಲ್, ಡಿಡಿ ನ್ಯೂಸ್, ಡಿಡಿ ಇಂಡಿಯಾ ವಾಹಿನಿಗಳಲ್ಲಿ, ರೇಡಿಯೋ, ಶಿಕ್ಷಣ ಇಲಾಖೆಯ ಯೂಟ್ಯೂಬ್ ಚಾನೆಲ್, ಟ್ವಿಟರ್ ಹ್ಯಾಂಡಲ್ (narendramodi, pmoindia, pibindia, EduMinofIndia, MyGovIndia ) ಸೇರಿದಂತೆ ರಾಜ್ಯ ಸಭಾ ಟಿವಿ, ಸ್ವಯಂ ಪ್ರಭಾ ಟಿವಿಗಳಲ್ಲಿಯೂ ವೀಕ್ಷಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಕೇಂದ್ರೀಯ ವಿದ್ಯಾಲಯ, ಮಲ್ಲೇಶ್ವರಂನ ಪ್ರಾಂಶುಪಾಲರಾದ ಭಾನುಮತಿ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕಿ ಪಲ್ಲವಿ ಹೊನ್ನಾಪುರ ಅವರು ಉಪಸ್ಥಿತರಿದ್ದರು.