ವಿಜಯಪುರ: ನಿಯಂತ್ರಣ ತಪ್ಪಿದ ಕಾರು ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮತ್ತು ಇಬ್ಬರು ಪುತ್ರರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ನಡೆದಿದೆ.
ಮೃತರನ್ನು ಸತ್ಯವೇಣಿ (38) ಹಾಗೂ ಅವರ ಪುತ್ರರಾದ ಹರಿವೆಂಕಟರಾಮ್ (20) ಮತ್ತು ಜಶ್ವಂತ್ (18) ಎಂದು ಗುರುತಿಸಲಾಗಿದೆ.

ಕೊಪ್ಪಳ ಜಿಲ್ಲೆಯ ಕಾರಟಗಿಯಿಂದ ಶಿರಡಿಗೆ ತೆರಳುತ್ತಿದ್ದ ವೇಳೆ ಶುಕ್ರವಾರ ಈ ಅಪಘಾತ ಸಂಭವಿಸಿದೆ. ಕಾರನ್ನು 20 ವರ್ಷದ ಹರಿವೆಂಕಟರಾಮ್ ಚಲಾಯಿಸುತ್ತಿದ್ದು, ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ನಡೆದಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮನಗೂಳಿ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ತಿಳಿಯಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.







































































