ಬೆಂಗಳೂರು: ಸಿಲಿಕಾನ್ ಸಿಟಿ ಇಡೀ ವಿಶ್ವದ ಗಮನಕೇಂದ್ರೀಕರಿಸಿರುವುದಂತೂ ಸತ್ಯ. ಭಾರತದಲ್ಲಿ ಐಟಿ-ಬಿಟಿ ಕ್ರಾಂತಿಗೆ ಮುನ್ನುಡಿ ಬರೆದಿರುವುದು ಇದೇ ಉದ್ಯಾನ ನಗರಿಯಿಂದ. ಆದರೆ ಪ್ರಸಕ್ತ ಪರಿಸ್ಥಿತಿ ನೋಡಿದರೆ ಅಧ್ವಾನದ ನಗರಿಯಾಗಿ ಪರಿವರ್ತಿತವಾಗಿದೆ.
ಇದಕ್ಕೆ ಕಾರಣವೇನು? ಪರಿಸ್ಥಿತಿ ಹೀಗಾಗಲು ಜನಪ್ರತಿನಿಧಿಗಳು ಎಡವಿದ್ದೆಲ್ಲಿ ಎಂಬುದನ್ನು ಸಾರ್ವಜನಿಕರ ಗಮನೆಳೆಯಲು ಮೂರು ಗಾಂಧಿ ಕೋತಿಗಳು ಬೆಂಗಳೂರಿನ ಬೀದಿಗಿಳಿದಿವೆ.
ರಾಜಧಾನಿ ಬೆಂಗಳೂರು ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಒಂದು. ಆದರೆ ಅಭಿವೃಧ್ದಿ ಕಾಮಗಾರಿಯ ಹೆಸರಲ್ಲಿ ಇಡೀ ವ್ಯವಸ್ಥೆಯು ಜನರ ಸಹನೆಯನ್ನು ಪ್ರಶ್ನಿಸುವಂತಿದೆ. ಜನರ ನಿದ್ದೆಗೆಡಿಸುವ ಈ ಪರಿಸ್ಥಿತಿಯನ್ನು ಅಣಕಿಸುವ ರೀತಿಯಲ್ಲಿತ್ತು ಗಾಂಧಿ ಕೋತಿಗಳ ಪ್ರದರ್ಶನ ವೈಖರಿ.
ಮೂರು ಕೋತಿ; ನೂರಾರು ಜನ..!!
ಪ್ರದರ್ಶನದಂಗಳದಲ್ಲಿ ಮೂರು ಕೋತಿಗಳು ಪರಿಸ್ಥಿತಿಯನ್ನು ಅಣಕಿಸಿದರೆ, ಆ ಪ್ರದೇಶದಲ್ಲಿ ಜಮಾಯಿಸಿದ್ದ ನೂರಾರು ಮಂದಿ ಕೂಡಾ ಮೂಕ ಪ್ರೇಕ್ಷಕರಾಗಿ ಸನ್ನಿವೇಶವನ್ನು ಗಮನಿಸುತ್ತಿದ್ದರು. ಹಲವರು ಈ ಸನ್ನಿವೇಶವನ್ನು ತಮ್ಮ ಮೊಬೈಲ್’ನಲ್ಲಿ ಚಿತ್ರೀಕರಿಸುತ್ತಿದ್ದ ದೃಶ್ಯಗಳೂ ಪರಿಸ್ಥಿತಿಗೆ ಹಿಡಿದ ಕನ್ನಡಿಯಂತಿತ್ತು.
ಈ ಅಣಕು ಪ್ರದರ್ಶನದ ಸಾರಥ್ಯ ವಹಿಸಿದ್ದ ಜಿ.ಆರ್.ಅನಿಲ್ ಕುಮಾರ್ ಪ್ರತಿಕ್ರಿಯೆ ನೀಡಿ, ಸಮಾಜದ ಬಗೆಗಿನ ಸಾರ್ವಜನಿಕ ಅಸಡ್ಡೆಯ ವಿಡಂಬನಾತ್ಮಕ ಪ್ರದರ್ಶನ ಇದಾಗಿದೆ. ನಮ್ಮ ಈ ಜಾಗೃತಿ ಪ್ರದರ್ಶನಕ್ಕೆ ಪ್ರಜ್ಞಾವಂತರಿಂದ ಬೆಂಬಲ ವ್ಯಕ್ತವಾಗಿದೆ ಎಂದರು. ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆಯಲಾಗಿದ್ದು, ‘ನಮೋ ಸಮಾಜ್’ ಮುಂದಾಳುತ್ವದಲ್ಲಿ ಈ ಅಭಿಯಾನ ನಿರಂತರ ಸಾಗಲಿದೆ ಎಂದವರು ತಿಳಿಸಿದರು.