ಬಂಟ್ವಾಳ; ಕರಾವಳಿರುವ ಪುರಾಣ ಪ್ರಸಿದ್ದ ಪೊಳಲಿ ರಾಜರಾಜೇಶ್ವರಿ ದೇವಾಲಯ ಇಂದು ನಾಡಿನ ಗಮನಸೆಳೆಯಿತು. ಪುರಾಣ ಫ್ರಸಿದ್ದ ‘ಪೊಳಲಿ ಚೆಂಡು ಉತ್ಸವ ನಡೆಯುವ ‘ಚೆಂಡಿನ ಗದ್ದೆಯಲ್ಲಿ’ ವಾರ್ಷಿಕ ಉಳುಮೆ ಕೈಂಕರ್ಯ ನೆರವೇರಿತು.
‘ಪೊಳಲಿ ಚೆಂಡು’ ಉತ್ಸವ (ಸಾಂದರ್ಭಿಕ ಚಿತ್ರ)
ಗದ್ದೆಯಲ್ಲಿ ಭತ್ತ ನಾಟಿಯು ಸಾಂಪ್ರದಾಯಿಕ ಪ್ರಕ್ರಿಯೆಯೇ ಇರಬಹುದು. ಆದರೆ, ಮಂಗಳೂರು ಸಮೀಪದ ಪೊಳಲಿ ದೇವಾಲಯದ ಚೆಂಡಿನ ಗದ್ದೆಯಲ್ಲಿನ ಭತ್ತ ನಾಟಿ ‘ದೇವರ ಕೃಷಿ’ ಎಂದೇ ಪ್ರತೀತಿ. ತುಳುನಾಡಿನ ಸಂಪ್ರದಾಯದಂತೆ ಪೂಜಾ ಕೈಂಕರ್ಯದೊಂದಿಗೆ ಆರಂಭವಾಗುವ ಈ ನಾಟಿ ಕೈಂಕರ್ಯವು ಪಾಡ್ದಣಗಳನ್ನು ಒಳಗೊಂಡು, ಜನಪದ ವೈಭವದೊಂದಿಗೆ ನೆರೆವೇರುತ್ತದೆ.
ಗತಕಾಲದಿಂದಲೂ ನೆರವೇರುತ್ತಾ ಬಂದಿರುವ ‘ಚೆಂಡಿನ ಗದ್ದೆ ನಾಟಿ’ ಕೈಂಕರ್ಯಕ್ಕೆ ಇದೀಗ ಯಾಂತ್ರಿಕ ಸ್ಪರ್ಶ ಸಿಕ್ಕಿದ್ದರೂ ಈಗಲೂ ಅದೇ ಭಕ್ತಿಯ ಕಾರ್ಯಕ್ರಮವಾಗಿ ನೆರವೇರುತ್ತಿದೆ. ನಾಡಿನ ಅಧಿದೇವತೆ ರಾಜರಾಜೇಶ್ವರಿ ದೇವಾಲಯದ ಜಾತ್ರೆಯ ‘ಚೆಂಡಾಟ’ ನೆರವೇರುವ ಗದ್ದೆಯಾಗಿದ್ದು, ಇದರಲ್ಲಿ ವರ್ಷಕ್ಜೊಮ್ಮೆ ನಡೆಯುವ ನಾಟಿ ಸಂಪ್ರದಾಯಕ್ಕೆ ಅದರದ್ದೇ ಆದ ಮಹತ್ವ ಇದೆ.
ಪೊಳಲಿ ಕ್ಷೇತ್ರದ ಚೆಂಡಿನ ಗದ್ದೆಯಲ್ಲಿ ನೆವೇರಿದ ನಾಟಿ ಕೈಂಕರ್ಯದಲ್ಲಿ ಸ್ಥಳೀಯ ಶಾಸಕ ರಾಜೇಶ್ ನಾಯ್ಕ್ ಭಾಗವಹಿಸಿದರು. ಕೃಷಿ ಇಲಾಖೆ ವತಿಯಿಂದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಮುತುವರ್ಜಿಯಲ್ಲಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಸುಮಾರು 2.50 ಎಕರೆ ಚೆಂಡಿನಗದ್ದೆಯಲ್ಲಿ 5 ನೇ ವರ್ಷದ ಭದ್ರತಳಿಯ ನಾಟಿ ಪ್ರಕ್ರಿಯೆ ನಡೆಯಿತು.
ಯಾಂತ್ರೀಕೃತ ಭತ್ತ ನಾಟಿಗೆ ಶಾಸಕ ರಾಜೇಶ್ ಯಂತ್ರದ ಮೂಲಕ ನೇಜಿ ನೆಟ್ಟು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು , ಕೃಷಿ ಇಲಾಖೆ ಹಾಗೂ ಊರಿನವರ ಸಹಕಾರದಿಂದ ಭತ್ತದ ಕೃಷಿ ನಾಟಿಯನ್ನು ಮಾಡಲಾಗಿದೆ. ಕಳೆದ ಬಾರಿ ಮಾಡಿದ ಕೃಷಿಯ ಮೂಲಕ 95 ಸಾವಿರದಷ್ಟು ದೇವಸ್ಥಾನಕ್ಕೆ ಉಳಿತಾಯವಾಗಿದ್ದು, ಇದರ ಹುಲ್ಲು ಸ್ಥಳೀಯ ಅನೇಕ ಕೃಷಿಕರಿಗೆ ಉಪಯೋಗವಾಗಿದೆ ಎಂದರು.
ಭತ್ತದ ಕೃಷಿಯಿಂದ ಹೆಕ್ಟೇರ್ ಗೆ 80 ಸಾವಿರ ರೂ ಲಾಭ ಗಳಿಸುವುದು ನಿಜಕ್ಕೂ ಉತ್ತಮ ಆದಾಯ ಎಂದ ಅವರು ಭತ್ತದ ಕೃಷಿ ಲಾಭದಾಯಕ ಕೃಷಿ ಎಂಬುದನ್ನು ಸೂಚಿಸುತ್ತದೆ, ಇದರಿಂದ ಇನ್ನಷ್ಟು ಭತ್ತದ ಕೃಷಿ ಚಟುವಟಿಕೆಗೆ ಉತ್ತೇಜನ ನೀಡುತ್ತದೆ ಎಂದರು.
ಇದೇ ಸಂದರ್ಭ ಮೂರು ಜನ ರೈತರಿಗೆ ಮಣ್ಣು ಆರೋಗ್ಯ ಚೀಟಿ ವಿತರಣೆ ನಡೆಸಲಾಯಿತು. ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ಪ್ರಮುಖರಾದ ವೆಂಕಟೇಶ ನಾವಡ, ಸುಕೇಶ್ ಚೌಟಕಾರ್ತಿಕ್ ಬಲ್ಲಾಳ್, ಚಂದ್ರಶೇಖರ್ ಶೆಟ್ಟಿ, ಯಶವಂತ ಪೊಳಲಿ, ಚಂದ್ರಾವತಿ ಪೊಳಲಿ, ಯಶೋಧ ಕಲ್ಕುಟ್ಟ, ಲೋಕೇಶ್ ಭರಣಿ, ನವೀನ ಕಟ್ಟಪುಣಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ, ಉಪನಿರ್ದೇಶಕಿ ಕುಮುದ, ಸಹಾಯಕ ಕೃಷಿ ನಿರ್ದೇಶಕಿ ವೀಣಾ, ಕೃಷಿ ಅಧಿಕಾರಿ ನಂದನ್ ಶೆಣೈ, ತಾಂತ್ರಿಕ ಅಧಿಕಾರಿ ಹನುಮಂತ ಕಾಳಗಿ ಮೊದಲಾದವರು ಈ ಕಾರ್ಯಕ್ರಮದಲ್ಲಿ ಭಾಗಿಯಾದರು.