ಬೆಂಗಳೂರು: ಆಂಧ್ರ ಪ್ರದೇಶದಲ್ಲೂ ಕರ್ನಾಟಕ ಮಾದರಿ ‘ಶಕ್ತಿ’ ಯೋಜನೆ ಜಾರಿ ಬಗ್ಗೆ ಚಂದ್ರಬಾಬು ನಾಯ್ಡು ಸರ್ಕಾರ ಚಿಂತನೆ ನಡೆಸಿದಂತಿದೆ. ಈ ಸಂಬಂಧ ಆಂಧ್ರಪ್ರದೇಶ ಸರ್ಕಾರದ ಸಾರಿಗೆ ಸಚಿವ ರಾಮಪ್ರಸಾದ್ ರೆಡ್ಡಿ ಹಾಗೂ ಇತರ ಸಚಿವರ ತಂಡ ಬೆಂಗಳೂರಿನಲ್ಲಿ ಕಸರತ್ತು ನಡೆಸಿದೆ.
ಆಂಧ್ರಪ್ರದೇಶ ಸರ್ಕಾರದ ಸಾರಿಗೆ, ಯುವಜನ & ಕ್ರೀಡಾ ಸಚಿವ ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿ, ಗೃಹ ಸಚಿವ ಅನಿತಾ ವಂಗಲಪುಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಗುಮ್ಮಿಡಿ ಸಂಧ್ಯಾರಾಣಿ ಹಾಗೂ ಸಾರಿಗೆ, ಆರ್ಥಿಕ ಇಲಾಖೆ ಅಧಿಕಾರಿಗಳು, ಆಂಧ್ರ ಪ್ರದೇಶ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳ ತಂಡ ಬೆಂಗಳೂರಿಗೆ ಆಗಮಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಕೇಂದ್ರ ಕಛೇರಿಗೆ ಭೇಟಿ ನೀಡಿದೆ. ನಿಗಮದಲ್ಲಿ ‘ಶಕ್ತಿ’ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಕೈಗೊಂಡಿರುವ ಕ್ರಮಗಳ ಕುರಿತು ಇಲ್ಲಿನ ಸಾರಿಗೆ ಸಚಿವರು, ಸಾರಿಗೆ ಇಲಾಖೆ ಕಾರ್ಯದರ್ಶಿಗಳು, ಹಾಗೂ KSRTC ಉಪಾಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರ ಜೊತೆ ‘ಶಕ್ತಿ ಯೋಜನೆ’ಯ ಫಲಪ್ರದ ಜಾಯಿ ಕುರಿತಂತೆ ಆಂಧ್ರ ಸರ್ಕಾರದ ನಿಯೋಗದ ಪ್ರಮುಖರು ಮಾಹಿತಿ ಪಡೆದುಕೊಂಡರು.
ಇದೇ ವೇಳೆ, KSRTC ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ-2ಕ್ಕೆ ಭೇಟಿ ನೀಡಿದ ತಂಡವು ಐರಾವತ ಕ್ಲಬ್ ಕಾಸ್ 2.0, ಐರಾವತ ಕ್ಲಬ್ ಕಾಸ್, ಅಂಬಾರಿ ಡ್ರೀಮ್ ಕ್ಲಾಸ್, ಪಲ್ಲಕ್ಕಿ, ಅಂಬಾರಿ ಉತ್ಸವ, ಫ್ಲೈ ಬಸ್, ನಗರ ಸಾರಿಗೆ, ರಾಜಹಂಸ ಹಾಗೂ ಅಶ್ವಮೇಧ ವಾಹನಗಳ ಕಾರ್ಯಕ್ಷಮತೆ ಪರೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿತು. ಘಟಕಗಳ ನಿರ್ವಹಣೆ, ವಾಹನಗಳಿಗೆ ನೀಡಿರುವ ಬ್ರಾಂಡಿಗ್ ಹಾಗೂ ವಾಹನಗಳ ಪುನಶ್ಚೇತನ ಕುರಿತು ಮೆಚ್ಚುಗೆ ವ್ಯಕ್ತಪಡಿಸಿತು. ಶಾಂತಿನಗರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ, ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆ ಯ ಉಚಿತ ಪ್ರಯಾಣದ ಕುರಿತು ಮಹಿಳಾ ಪ್ರಯಾಣಿಕರಿಂದ ಅನುಭವ ಪಡೆದುಕೊಂಡ ಸನ್ನಿವೇಶವೂ ಗಮನಸೆಳೆಯಿತು.