ಬೆಂಗಳೂರು: ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಮಿನರಲ್ಸ್ ಲಿಮಿಟೆಡ್ ನಿಗಮ ಇನ್ನು ಮುಂದೆ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್.
ಈ ಹೆಸರು ಬದಲಾವಣೆ ವಿಚಾರ ಗರಿಬಿಚ್ಚಿಕೊಂಡಿದ್ದು ರಾಜ್ಯ ಸರ್ಕಾರ ಕೂಡಾ ಪ್ರಕ್ರಿಯೆಯನ್ನು ಬಿರುಸುಗೊಳಿಸಿದೆ. ರಾಜ್ಯ ಸರ್ಕಾರದ ಈ ನಿರ್ಧಾರ ಕುರಿತಂತೆ ದೆಹಲಿಯಲ್ಲಿ ಗಣಿ ಸಚಿವ ಮುರುಗೇಶ್ ನಿರಾಣಿ ಅವರು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಜೊತೆ ನಡೆಸಿದ ಚರ್ಚೆಯ ಸಂದರ್ಭದಲ್ಲಿ ಕುತೂಹಲಕಾರಿ ವಿಚಾರಗಳು ಅನಾವರಣಗೊಂಡಿವೆ.
ಈ ನಿಗಮದ ಮರುನಾಮಕರಣವಷ್ಟೇ ಅಲ್ಲ, ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಪಡುವರಿ, ಯಡಿಟರೆ ಮತ್ತು ಬೈಂದೂರುಗಳಲ್ಲಿ ಬಾಕ್ಸೈಟ್ ಖನಿಜಕ್ಕಾಗಿ 120.60 ಹೆಕ್ಟೇರ್ ಪ್ರದೇಶವನ್ನು ಬಳಸುವುದು, ಕುಂದಾಪುರ ತಾಲ್ಲೂಕಿನ ಪಡುವರೆ ಗ್ರಾಮದಲ್ಲಿ 23.80 ಹೆಕ್ಟೇರ್ಪ್ರದೇಶವನ್ನು ಬಳಕೆ ಮಾಡುವುದು. ಅಂತೆಯೇ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನಲ್ಲಿ ಗಣಿಗಾರಿಕೆಗಾಗಿ 145.00 ಹೆಕ್ಟೇರ್ ಗಣಿಗಾರಿಕೆಗೆ ಸಂಬಂಧಿಸಿದ ಪ್ರಸ್ತಾವನೆ ಕೂಡ ಕೇಂದ್ರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (ಎಂಒಇಎಫ್ ಮತ್ತು ಸಿಸಿ) ಬಾಕಿ ಇದ್ದು ಅವುಗಳನ್ನೂ ಪರಿಪೂರ್ಣಗೊಳಿಸಸಬೇಕಾದ ಅತ್ಯಾದ್ಯತೆಯ ನಡೆ ಬಗ್ಗೆಯೂ ಈ ನಾಯಕರು ಮಹತ್ವದ ಚರ್ಚೆ ನಡೆಸಿ ರಾಜತಾಂತ್ರಿಕ ಹಾಗೂ ಉದ್ಯಮ ವಲಯದಲ್ಲಿ ಕೌತುಕದ ವಿದ್ಯಮಾನಕ್ಕೆ ಸಾಕ್ಷಿಯಾದರು.
ಲಕ್ಷಾಂತರ ಉದ್ಯೋಗಗಳ ಸೃಷ್ಟಿಗೆ ವೇದಿಕೆ ಕಲ್ಪಿಸುವ ಈ ಯೋಜನೆಗಳಿಗೆ ಕೇಂದ್ರ ಸರ್ಕಾರದ ಸಹಕಾರ ಇದೆ ಎಂದು ಸಚಿವ ಪ್ರಹ್ಲಾದ್ ಜೋಷಿ ನೀಡಿದ ಆಶ್ವಾಸನೆ ಕೂಡ ಗಮನಸೆಳೆದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಮುರುಗೇಶ್ ನಿರಾಣಿ, ರಾಜ್ಯ ಸರ್ಕಾರದ ಪ್ರಸ್ತಾವನೆಗಳನ್ನು ಅಧಿಕಾರಿಗಳ ಜೊತೆ ಚರ್ಚೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಸಚಿವ ಪ್ರಹ್ಲಾದ್ ಜೋಶಿ ಅವರಿಂದ ಭರವಸೆ ಸಿಕ್ಕಿದೆ. ನಮಗೆ ಕೇಂದ್ರ ಸರ್ಕಾರದಿಂದ ನ್ಯಾಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.