ದೊಡ್ಡಬಳ್ಳಾಪುರ:- ಕೇಂದ್ರ ಸಚಿವೆ ನಿರ್ಮಾಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ರೈತ ಪರ, ಜನಪರವಾಗಿದೆ. ಬಜೆಟ್ ನಲ್ಲಿ ಯಾವುದೇ ವರ್ಗಕ್ಕೂ ಅನ್ಯಾಯವಾಗಿಲ್ಲ. ಅಭಿವೃದ್ಧಿಗೆ ಪೂರಕವಾದ ಬಜೆಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಂಡಿಸಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ದೇಶದ ಇತಿಹಾಸದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಇದೇ ಮೊದಲ ಬಾರಿಗೆ 2 ಲಕ್ಷ 23 ಸಾವಿರ ಕೋಟಿ ಹಣವನ್ನು ಮೀಸಲಿಡಲಾಗಿದೆ. ಕರೊನಾ ಹಿಮ್ಮೆಟ್ಟಿಸುವಲ್ಲಿ ಭಾರತ ಸಫಲವಾಗಿದೆ. ಭಾರತದಲ್ಲಿ ತಯಾರಾಗಿರುವ ಕರೊನಾ ಲಸಿಕೆ 53 ದೇಶಗಳಿಂದ ಬೇಡಿಕೆ ಬಂದಿದೆ. ಪ್ರಪಂಚದ ಆರೋಗ್ಯ ಕೇಂದ್ರದ ಹಬ್ ಆಗಿ ಭಾರತ ಬೆಳೆಯುತ್ತಿದೆ. ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಬೆಂಗಳೂರು ಮೆಟ್ರೋ, ಬೆಂಗಳೂರು ಉಪನಗರ ಯೋಜನೆ, ರೈಲ್ವೆ, ಉದ್ಯೋಗ, ಕೈಗಾರಿಕೆ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದರು.
ಅಂತಾರಾಷ್ಟ್ರೀಯ ಕಚ್ಚಾತೈಲ ದರದ ಏರಿಳಿಕೆಗೆ ಅನುಗುಣವಾಗಿರುವ ಇಂಧನ ದರ ನಿಗದಿ ಮಾಡಲಾಗುತ್ತಿದೆ. ಕಾಂಗ್ರೆಸ್ ನಡೆಸುತ್ತಿರುವುದು ಕೇವಲ ರಾಜಕೀಯ ಕಾರಣಕ್ಕೆ. ಬಿಜೆಪಿ ವಿರುದ್ಧ ಯಾವುದೇ ಪ್ರತಿಭಟನೆಗೆ ಅವಕಾಶ ಸಿಗದ ಕಾರಣ ಈಗ ಅಡ್ಡದಾರಿ ಹಿಡಿದಿದೆ ಎಂದರು. ಮುಂದಿನ ಐದಾರು ವರ್ಷಗಳಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಾಗಲಿದೆ ಎಂದರು.
ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ನೇರ ಕೈವಾಡವಿದೆ. ರೈತರ ಹೋರಾಟ ಕೇವಲ ಎರಡ್ಮೂರು ರಾಜ್ಯಗಳಿಗೆ ಸೀಮಿತವಾಗಿದೆ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಹಿಂದ, ಅಹಿಂದ ಯಾವುದೇ ಯಾತ್ರೆ, ಸಭೆ ಮಾಡಿದರು ಸಿದ್ದರಾಮಯ್ಯರನ್ನು ಮತ್ತೆ ಜನ ಕೈಹಿಡಿಯುವುದಿಲ್ಲ. ಸಿಎಂ ಆಗಿದ್ದಾಗಲೇ ಸಿದ್ದರಾಮಯ್ಯರನ್ನು ಜನ ತಿರಸ್ಕಾರ ಮಾಡಿದ್ದಾರೆ ಎಂದರು. ತಾಲ್ಲೂಕು, ಜಿಲ್ಲಾ ಪಂಚಾಯತಿ ಎಲ್ಲಾ ಚುನಾವಣೆಗಳನ್ನು ಸವಾಲಾಗಿ ಸ್ವೀಕರಿಸಲಾಗುವುದು ಎಂದರು.