ಮುಂಬಯಿ: ಸಮಾಜ ಸಂಘಟನೆ, ಸಾಂಸ್ಕೃತಿಕ ಚಟುವಟಿಕೆ ಸಹಿತ ನಿರಂತರ ಚಟುವಟಿಕೆಗಳ ಮೂಲಕ ಗಮನಸೆಳೆಯುತ್ತಿರುವ ಮುಂಬಯಿಯ ಬಂಟರ ಸಂಘ’ (Bunts Sangh Mumbai) ಯುವಜನರ ಅಭ್ಯುದಯ ಸಂಬಂಧ ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರ ಜೊತೆಯಲ್ಲೇ, ಬಂಟ್ಸ್ ಸಂಘ ಮುಂಬೈ – ಯೂಥ್ ವಿಂಗ್ ಆಯೋಜಿಸಿದ್ದ ಬಂಟ್ಸ್ ಪ್ರೀಮಿಯರ್ ಲೀಗ್ (Bunts Premier League) ಕ್ರಿಕೆಟ್ ಪಂದ್ಯಾವಳಿ ಜಿದ್ದಾಜಿದ್ದಿನ ಅಖಾಡಕ್ಕೆ ಸಾಕ್ಷಿಯಾಗಿತ್ತು.
ನವಿ ಮುಂಬಯಿ ವಾಶಿಯ ಸೆಕ್ಟರ್ 1ರಲ್ಲಿರುವ ನವಿ ಮುಂಬಯಿ ಸ್ಪೋರ್ಟ್ಸ್ ಎಸೋಸಿಯೆಶನ್ ಮೈದಾನದಲ್ಲಿ ಈ ‘ಬಂಟ್ಸ್ ಪ್ರೀಮಿಯರ್ ಲೀಗ್ 2025’ ಆಯೋಜಿತವಾಗಿತ್ತು. ಮಾ.16ರಂದು ಬೆಳಿಗ್ಗೆ ಆರಂಭವಾದ ಪಂದ್ಯಾವಳಿಗಳಲ್ಲಿ ಬಂಟರ ಸಂಘದ 9 ಪ್ರಾದೇಶಿಕ ಸಮಿತಿಗಳು, ಮುಲುಂಡ್ ಬಂಟ್ಸ್, ಥಾಣೆ ಬಂಟ್ಸ್, ಬೋಂಬೆ ಬಂಟ್ಸ್ ಎಸೋಸಿಯೇಶನ್ ಸೇರಿದಂತೆ 12 ತಂಡಗಳು ಸೆಣಸಾಡಿದವು. ಅದರಲ್ಲೂ ವನಿತೆಯರ ವಿಭಾಗದ ಪಂದ್ಯಾವಳಿಗಳು ಭರ್ಜರಿ ಕಾದಾಟಕ್ಕೆ ಸಾಕ್ಷಿಯಾದವು.
ಡೊಂಬಿವಲಿ ಪ್ರಾದೇಶಿಕ ಸಮಿತಿ ತಂಡವು ಪುರುಷರ ವಿಭಾಗದಲ್ಲಿ ಚಾಂಪಿಯನ್’ಷಿಪ್ ಗೆದ್ದುಕೊಂಡರೆ, ಥಾಣೆ ಬಂಟ್ಸ್ (ರನ್ನರ್ ಅಪ್) ಪ್ರಶಸ್ತಿ ಪಡೆಯಿತು. ಮಹಿಳಾ ವಿಭಾಗದಲ್ಲಿ ‘ಜೋಗೇಶ್ವರಿ ದಹಿಸರ್ ಪ್ರಾದೇಶಿಕ ಸಮಿತಿ’ ತಂಡ ಗೆದ್ದು ಬೀಗಿದೆ. ಈ ವನಿತೆಯರ ತಂಡವು ರೋಮಾಂಚಕಾರಿ ಪಂದ್ಯದಲ್ಲಿ ಜಯಭೇರಿ ಭಾರಿಸಿ ಈ ಬಾರಿಯ ಚಾಂಪಿಯನ್ ಆಗಿ ಹೊರಹೊಮ್ಮಿತು. ಅದರಲ್ಲೂ ಮಂಗಳೂರು ಮೂಲದ ವಿಂಧ್ಯಾ ಜಗದೀಶ್ ಶೆಟ್ಟಿ ಶಿಬರೂರು ಅವರ ಅದ್ಭುತ ಬೌಲಿಂಗ್ ಹಾಗೂ ಅತ್ಯುತ್ತಮ ಆಟವು ಜೋಗೇಶ್ವರಿ ದಹಿಸರ್ ಪ್ರಾದೇಶಿಕ ಸಮಿತಿ ತಂಡದ ಗೆಲುವಿಗೆ ಕಾರಣವಾಯಿತು. ಮುಲುಂಡ್ ಬಂಟ್ಸ್ (ರನ್ನರ್ ಅಪ್) ಪ್ರಶಸ್ತಿ ಪಡೆದಿದೆ.
ಮಹಿಳಾ ವಿಭಾಗದ ‘ಬಂಟ್ಸ್ ಪ್ರೀಮಿಯರ್ ಲೀಗ್ 2025’ ಫೈನಲ್ ಪಂದ್ಯದಲ್ಲಿ ಮುಲುಂಡ್ ಬಂಟ್ಸ್ ಹಾಗೂ ಜೋಗೇಶ್ವರಿ ದಹಿಸರ್ ಪ್ರಾದೇಶಿಕ ಸಮಿತಿ ತಂಡಗಳು ಮುಖಾಮುಖಿಯಾದವು. ಕದನ ಕೌತುಕಕ್ಕೆ ಸಾಕ್ಷಿಯಾದ ಈ ಹಣಾಹಣಿಯಲ್ಲಿ ಜೋಗೇಶ್ವರಿ ದಹಿಸರ್ ಪ್ರಾದೇಶಿಕ ಸಮಿತಿ ತಂಡದ ವಿಂಧ್ಯಾ ಜಗದೀಶ್ ಶೆಟ್ಟಿ ಶಿಬರೂರು ಅವರು ಉತ್ತಮ ಬೌಲಿಂಗ್ ಮಾಡಿದರು. ಅವರ ಬೌಲಿಂಗ್ ದಾಳಿಗೆ ಎದುರಾಳಿ ತಂಡ ರಂಗ್ ಪೇರಿಸಲು ಪರದಾಡುವಂತಾಯಿತು. ಬ್ಯಾಟಿಂಗ್ ಹಂತದಲ್ಲೂ ವಿಂಧ್ಯಾ ಜೆ.ಶೆಟ್ಟಿ ಅವರ ಉತ್ತಮ ಆಟವು ತಂಡದ ಗೆಲುವಿಗೆ ಆಧಾರವಾಯಿತು. ಈ ಮೂಲಕ ಜೋಗೇಶ್ವರಿ ದಹಿಸರ್ ಪ್ರಾದೇಶಿಕ ಸಮಿತಿಯು ರಣಭೇರಿ ಭಾರಿಸಿದ್ದು, ಕ್ರೀಡಾಂಗಣದಲ್ಲಿ ಅದ್ಭುತ ಪ್ರದರ್ಶನ ನೀಡಿದ ವಿಂಧ್ಯಾ ಜೆ.ಶೆಟ್ಟಿ ತಮ್ಮ ಸಮುದಾಯದ ಓರ್ವ ಅತ್ಯುತ್ತಮ ಕ್ರಿಕೆಟ್ ತಾರೆ ಎಂದು ಮತ್ತೊಮ್ಮೆ ಗುರುತಾದರು.
ಯಾರಿವರು ವಿಂಧ್ಯಾ ಶೆಟ್ಟಿ?
ಮಂಗಳೂರು ಸಮೀಪದ ಶಿಬರೂರು ಮೂಲದ ವಿಂಧ್ಯಾ ಜಗದೀಶ್ ಶೆಟ್ಟಿ ಬಾಲ್ಯದಲ್ಲೇ ಕ್ರೀಡಾಪಟುವಾಗಿ ಗಮನಸೆಳೆದವರು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದಿರುವ ಅವರು, ವಿದ್ಯಾರ್ಥಿ ದೆಸೆಯಲ್ಲೇ ಹಲವಾರು ಕ್ರೀಡಾಕೂಟಗಳಲ್ಲಿ ತಮ್ಮ ಛಾಪು ಪ್ರದರ್ಶಿಸಿದ್ದರು. ಲೇಖಕಿಯಾಗಿ, ಭಾಷಣಗಾರ್ತಿಯಾಗಿ, ಸಾಮಾಜಿಕ ಕಾರ್ಯಕರ್ತೆಯಾಗಿ ಕ್ರಿಯಾಶೀಲರಾಗಿರುವ ವಿಂಧ್ಯಾ ಜಗದೀಶ್ ಶೆಟ್ಟಿ ಶಿಬರೂರು ಅವರು ಪ್ರಸ್ತುತ ಮುಂಬೈಯಲ್ಲಿ ವಾಸವಿದ್ದಾರೆ. ಮುಂಬೈ ಬಂಟ್ಸ್ ಸಂಘದಲ್ಲೂ ಸಕ್ರಿಯರಾಗಿದ್ದು, ಕಳೆದ ಹಲವು ವರ್ಷಗಳಲ್ಲಿ ಹಲವಾರು ಕ್ರೀಡಾಕೂಟಗಳಲ್ಲಿ ಪ್ರಶಸ್ತಿ ಗೆಲ್ಲುತ್ತಾ ಗಮನಸೆಳೆಯುತ್ತಿದ್ದಾರೆ.
ಅನನ್ಯ ಕ್ರೀಡಾಕೂಟ:
ಅಭ್ಯುದಯ ಸಹಿತ ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಯುವ ವಿಭಾಗದ ಕಾರ್ಯಾಧ್ಯಕ್ಷ ಸವಿನ್ ಜೆ. ಶೆಟ್ಟಿಯವರ ನೇತೃತ್ವದಲ್ಲಿ ಈ ಕ್ರೀಡಾಕೂಟ ನಡೆಯಿತು. ಬಂಟರ ಸಂಘದ ಉಪಾಧ್ಯಕ್ಷ ಮಹೇಶ್ ಎಸ್. ಶೆಟ್ಟಿಯವರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಸಮಾರೋಪ ಸಮಾರಂಭದಲ್ಲಿ ಬಂಟರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್.ಕೆ. ಶೆಟ್ಟಿ, ಮುಂಬಯಿ ಕ್ರಿಕೆಟ್ ಎಸೋಸಿಯೇಶನ್‌ನ ಮಾಜಿ ಕಾರ್ಯದರ್ಶಿ ಡಾ.ಪಿ.ವಿ.ಶೆಟ್ಟಿ, ನವಿಮುಂಬಯಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಭಾಸ್ಕರ್ ಶೆಟ್ಟಿ ದಕ್ಷಿಣ್, ಬಂಟರ ಸಂಘದ ಗೌ-ಕೋಶಾಧಿಕಾರಿ ಇನ್ನ ಬಗ್ಗರ ಗುತ್ತು ಸಿಎ ರಮೇಶ್ ಶೆಟ್ಟಿ. ಜೋಗೇಶ್ವರಿ ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಪ್ರೇಮನಾಥ್ ಶೆಟ್ಟಿ ಕೊಂಡಾಡಿ, ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸುಕುಮಾರ್ ಶೆಟ್ಟಿ, ಬೋಂಬೆ ಬಂಟ್ಸ್ ಎಸೋಸಿಯೇಶನ್‌ನ ಮಾಜಿ ಅಧ್ಯಕ್ಷ ಶ್ಯಾಮ ಎನ್. ಶೆಟ್ಟಿ, ನವಿಮುಂಬಯಿ ಪ್ರಾದೇಶಿಕದ ಮಾಜಿ ಕಾರ್ಯಾಧ್ಯಕ್ಷ ಜಗದೀಶ್ ಸಹಿತ ಅನೇಕ ಗಣ್ಯರು ಉಪಸ್ಥಿತರಿದ್ದರು. ನಂದಿಕೂರು, ನವಿಮುಂಬಯಿ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಖಾಂದೇಶ್ ಭಾಸ್ಕರ್ ಶೆಟ್ಟಿ, ಸಂಘದ ಕ್ರೀಡಾ ಕಾರ್ಯಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಗೌತಮ್ ಶೆಟ್ಟಿ ಮತ್ತು ಯುವ ವಿಭಾಗದ ಉಪ ಕಾರ್ಯಾಧ್ಯಕ್ಷ ತಾರನಾಥ್ ಕೆ. ಶೆಟ್ಟಿ, ಗೌರವ್ ಆರ್. ಪಯ್ಯಡೆ, ಕಾರ್ಯದರ್ಶಿ ಸುಮಿತ್ ಎಮ್. ಶೆಟ್ಟಿ, ಕೋಶಾಧಿಕಾರಿ ಪ್ರತೀಕ್ ಡಿ. ಶೆಟ್ಟಿ, ವಂಶ ಕೆ. ಶೆಟ್ಟಿ, ಶ್ರವಣ್ ಎಸ್. ಶೆಟ್ಟಿ, ಸಹಿತ ಗಣ್ಯರ ಪಾಲ್ಗೊಳ್ಳುವಿಕೆ ಕೂಡಾ ಗಮನಸೆಳೆಯಿತು.