ದೆಹಲಿ: ಸುಪ್ರೀಂಕೋರ್ಟ್ ನಿದೇರ್ಶನದಂತೆ ಕಳೆದ ಆರು ವರ್ಷಗಳಿಂದ ಕಬ್ಬಿಣದ ಅದಿರು ಗಣಿ ಕಂಪನಿಗಳಿಂದ ಸಂಗ್ರಹಿಸಿರುವ ಸುಮಾರು 18 ಸಾವಿರ ಕೋಟಿ ರೂಪಾಯಿಯನ್ನು ಕರ್ನಾಟಕಕ್ಕೆ ನೀಡುವ ನಿಟ್ಟಿನಲ್ಲಿ ಕಾನೂನು ಮತ್ತು ಆಡಳಿತಾತ್ಮಕ ನೆರವು ನೀಡಬೇಕೆಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರು, ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಗಣಿ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ದೆಹಲಿಯಲ್ಲಿ ಜೋಷಿಯವರನ್ನು ಭೇಟಿ ಮಾಡಿದ ಅವರು ಅಧಿಕೃತವಾಗಿ ರಾಜ್ಯದ ಪರವಾಗಿ ಮನವಿಪತ್ರವನ್ನು ಸಲ್ಲಿಸಿದರು. ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಕಬ್ಬಿಣದ ಅದಿರು ಗಣಿಗಾರಿಕೆ ನಡೆಸಿರುವ ದಂಡ ಮತ್ತು ಸುಂಕದ (ಲೆವಿ) ರೂಪದಲ್ಲಿ ಸಂಗ್ರಹಿಸಿದ ಸುಮಾರು 18,000 ಕೋಟಿ ರೂಪಾಯಿಗಳನ್ನು ಕಳೆದ ಸಂಗ್ರಹಿಸಲಾಗಿದೆ. ಆ ಹಣವನ್ನು ಗಣಿಗಾರಿಕೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ರೂಪು ರೇಷೆಯನ್ನು ಸಿದ್ಧಪಡಿಸುವ ಕುರಿತಂತೆ ಪ್ರಹ್ಲಾದ್ ಜೋಶಿ ಅವರ ಜೊತೆ ನಿರಾಣಿವರು ಸಮಗ್ರವಾಗಿ ಚರ್ಚಿಸಿದರು.
ನಿಧಿ ಬಳಕೆಗೆ ನ್ಯಾಯಾಲಯವು ಅನುಮತಿ ನೀಡಿದರೆ, ಬಳ್ಳಾರಿ, ಚಿತ್ರದುರ್ಗ, ಬಾಗಲಕೋಟೆ ಮತ್ತು ತುಮಕೂರು ಸೇರಿದಂತೆ ಗಣಿಗಾರಿಕೆ ನಡೆಯುವ ಪ್ರದೇಶಗಳಲ್ಲಿ ಈ ಭಾಗದ ಜನರಿಗೆ ಪುನರ್ವಸತಿಗೆ ಅವಕಾಶ ನೀಡುವ ಅಗತ್ಯದ ಬಗ್ಗೆ ಕೇಂದ್ರ ಸಚಿವರ ಗಮನಕ್ಕೆ ಸಚಿವ ನಿರಾಣಿ ಅವರು ತಂದರು.
ಈಗಾಗಲೇ ಒರಿಸ್ಸಾದಲ್ಲಿ ಗಣಿಗಾರಿಕೆ ಚಟುವಟಿಕೆ ನಡೆಸಿದ ಕಂಪೆನಿಗಳನ್ನು ಆಯಾ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ಸೇರಿದಂತೆ ಮತ್ತಿತರ ಅಗತ್ಯತೆಗಳನ್ನು ಕಲ್ಪಿಸಿಕೊಡಲು ಅನುಮತಿ ನೀಡಿತ್ತು. ನಮ್ಮ ರಾಜ್ಯದ ಒಂದು ಪ್ರಕರಣದಲ್ಲಿ ಇದೇ ರೀತಿಯ ಆದೇಶ ಬಂದಿತ್ತು ಎಂಬುದನ್ನು ಮನವರಿಕೆ ಮಾಡಿಕೊಟ್ಟರು.
ಪ್ರಸ್ತುತ ನ್ಯಾಯಾಲಯದ ಅಧೀನದಲ್ಲಿರುವ ₹18 ಸಾವಿರ ಕೋಟಿ ಮುಂದೆ ಸಂಗ್ರಹವಾಗಲಿರುವ ರಾಜಧನ ಸೇರಿದಂತೆ ಒಟ್ಟು ₹25 ಸಾವಿರ ಕೋಟಿ ರೂ. ಕ್ರಿಯಾ ಯೋಜನೆಯನ್ನು ಇಲಾಖೆ ಸಿದ್ಧಪಡಿಸಿದೆ ಎಂಬುದನ್ನು ತಿಳಿಸಿದರು.
ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾ ಖನಿಜ ನಿಧಿ ಅಡಿ ₹2,200 ಕೋಟಿ ಸಂಗ್ರಹವಾಗಿದೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಮುಖ್ಯಸ್ಥರಾಗುತ್ತಾರೆ. ಈ ಹಣದಿಂದಲೂ ನಾವು ವಿವಿಧ ರೀತಿಯ ಸಮಾಜಮುಖಿ ಕೆಲಸಗಳನ್ನು ಕೈಗೊಳ್ಳಬಹುದಾಗಿದೆ. ಕೇಂದ್ರ ಸರ್ಕಾರ ನಮಗೆ ಅಗತ್ಯವಾದ ನೆರವು ನೀಡಬೇಕೆಂದು ಒತ್ತಾಯ ಮಾಡಿದರು.
ಈ ಹಿಂದೆ ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿದ್ದ ಸಚಿವ ಮುರುಗೇಶ್ ನಿರಾಣಿ ಅವರು ಔಪಚಾರಿಕವಾಗಿ ಚರ್ಚೆ ಮಾಡಿದ್ದನ್ನು ಸ್ಮರಿಸಬಹುದು. ದೆಹಲಿಗೆ ಬರುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ನಿರಾಣಿ ಅವರು ತೆರಳಿದ್ದರು.
ಇನ್ನು ಭೇಟಿಯ ಸಂದರ್ಭದಲ್ಲಿ ಸಚಿವ ನಿರಾಣಿ ಅವರು ರಾಜ್ಯದಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಗಣಿಗಾರಿಕೆ ಕಾರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಕೂಡ ಕೇಂದ್ರ ಸಚಿವರಿಗೆ ಮನವರಿಕೆ ಮಾಡಿದ್ದಾರೆ.