ಮುಂಬೈ: ಜನಪ್ರಿಯ ವೆಬ್ ಸರಣಿ ‘ಮಿರ್ಜಾಪುರ್’ ಈಗ ಚಲನಚಿತ್ರ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಪಂಕಜ್ ತ್ರಿಪಾಠಿ ಹಾಗೂ ಅಲಿ ಫಜಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಮಿರ್ಜಾಪುರ್: ದಿ ಮೂವಿ’ ಚಿತ್ರವು ಸೆಪ್ಟೆಂಬರ್ 4ರಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಗುರುವಾರ ಪ್ರಕಟಿಸಿದ್ದಾರೆ.
ಚಿತ್ರ ನಿರ್ಮಾಣ ಸಂಸ್ಥೆ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಚಿತ್ರದ ಪೋಸ್ಟರ್ ಹಂಚಿಕೊಂಡು ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಮರುಭೂಮಿ ಹಿನ್ನೆಲೆಯಲ್ಲಿರುವ ಪೋಸ್ಟರ್‌ನಲ್ಲಿ, ಎಸ್‌ಯುವಿ ವಾಹನಗಳ ದಂಡು ಧೂಳು ಮತ್ತು ರಕ್ತದ ಹಾದಿಯಂತೆ ಕಾಣುವ ದಾರಿಯಲ್ಲಿ ಸಾಗುತ್ತಿರುವ ದೃಶ್ಯವಿದ್ದು, ಹಿಂಸೆ ಮತ್ತು ಅಧಿಕಾರದ ಸಂಘರ್ಷವನ್ನು ಸೂಚಿಸುತ್ತದೆ.
‘ಮಿರ್ಜಾಪುರ್’ ಸರಣಿ ಉತ್ತರ ಪ್ರದೇಶದ ಪೂರ್ವಾಂಚಲ ಪ್ರದೇಶದ ಮಿರ್ಜಾಪುರ್ ಜಿಲ್ಲೆಯ ಅಪರಾಧ ಲೋಕವನ್ನು ಕೇಂದ್ರವಾಗಿಟ್ಟುಕೊಂಡಿದ್ದು, ಅಪರಾಧದ ದೊರೆ ಅಖಂಡಾನಂದ ‘ಕಾಲೀನ್’ ತ್ರಿಪಾಠಿ ಪಾತ್ರಕ್ಕೆ ಪಂಕಜ್ ತ್ರಿಪಾಠಿ ಜೀವ ತುಂಬಿದ್ದಾರೆ. ಅಲಿ ಫಜಲ್, ದಿವ್ಯೇಂದು ಶರ್ಮಾ, ಶ್ವೇತಾ ತ್ರಿಪಾಠಿ, ರಸಿಕಾ ದುಗಲ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಚಲನಚಿತ್ರ ರೂಪಾಂತರದಲ್ಲೂ ಪಂಕಜ್ ತ್ರಿಪಾಠಿ, ಅಲಿ ಫಜಲ್, ಶ್ವೇತಾ ತ್ರಿಪಾಠಿ, ರಸಿಕಾ ದುಗಲ್ ಮತ್ತು ದಿವ್ಯೇಂದು ಅವರು ಮತ್ತೆ ತಮ್ಮ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಜಿತೇಂದ್ರ ಕುಮಾರ್, ಸೋನಲ್ ಚೌಹಾಣ್ ಮತ್ತು ರವಿ ಕಿಶನ್ ಹೊಸ ಪಾತ್ರಗಳೊಂದಿಗೆ ಚಿತ್ರಕ್ಕೆ ಸೇರ್ಪಡೆಯಾಗಿದ್ದಾರೆ.
ಚಿತ್ರದ ಚಿತ್ರೀಕರಣ ಫೆಬ್ರವರಿ 1ರಂದು ಪೂರ್ಣಗೊಂಡಿದ್ದು, ನಟಿ ಶ್ವೇತಾ ತ್ರಿಪಾಠಿ ಸಾಮಾಜಿಕ ಮಾಧ್ಯಮದಲ್ಲಿ ‘ಮಿರ್ಜಾಪುರ್: ದಿ ಮೂವಿ – ಇಟ್ಸ್ ಎ ರ್ಯಾಪ್’ ಎಂಬ ಸಂದೇಶದೊಂದಿಗೆ ಚಿತ್ರೀಕರಣ ಮುಕ್ತಾಯದ ಚಿತ್ರವನ್ನು ಹಂಚಿಕೊಂಡಿದ್ದರು. ಜನಪ್ರಿಯ ಸರಣಿಯ ಚಲನಚಿತ್ರ ರೂಪಾಂತರದ ಮೇಲೆ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿದೆ.























































