ಬೆಂಗಳೂರು: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರು ನಡೆಸಿದ ಪ್ರಯತ್ನದ ಫಲವಾಗಿ ಮೈಲಾನ್ ಫಾರ್ಮಾ ಕಂಪನಿಯು ಕರ್ನಾಟಕ ರಾಜ್ಯಕ್ಕೆ ಹೆಚ್ಚುವರಿ ರೆಮ್ಡೆಸಿವಿರ್ ಚುಚ್ಚುಮದ್ದು ಒದಗಿಸಲು ಒಪ್ಪಿಕೊಂಡಿದೆ.
ಕೊರೊನಾ ಚಿಕಿತ್ಸೆಯಲ್ಲಿ ಬಳಸುವ ರೆಮ್ಡೆಸಿವಿರ್ ಉತ್ಪಾದನೆ ಮತ್ತು ಪೂರೈಕೆ ಏರುಪೇರಾದ ಕಾರಣ ಕಳೆದ ವಾರದಿಂದ ಕೇಂದ್ರ ಸರ್ಕಾರವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಫಾರ್ಮಾ ಕಂಪನಿಗಳು ತಮ್ಮ ರೆಮ್ಡೆಸಿವಿರ್ ಉತ್ಪಾದನೆಯಲ್ಲಿ ಶೇಕಡಾ 70ರಷ್ಟು ಕೇಂದ್ರ ಸರ್ಕಾರವು ಸೂಚಿಸುವ ರಾಜ್ಯಗಳಿಗೆ ನಿಗದಿತ ಪ್ರಮಾಣದಲ್ಲಿ ಪೂರೈಕೆ ಮಾಡಬೇಕಾಗುತ್ತದೆ. ಇನ್ನುಳಿದ ಶೇಕಡಾ 30ರಷ್ಟು ಉತ್ಪಾದನೆಯ ವಿತರಣೆಯನ್ನು ಕಂಪನಿಗಳ ವಿವೇಚನೆಗೆ ಬಿಡಲಾಗಿದೆ.
ಬುಧವಾರ ಕೇಂದ್ರವು ಕರ್ನಾಟಕಕ್ಕೆ ಏಪ್ರಿಲ್ 30ರವರೆಗಿನ ಬಳಕೆಗಾಗಿ 25352 ರೆಮ್ಡೆಸಿವಿರ್ ವೈಯಲ್ಸ್ ಹಂಚಿಕೆ ಮಾಡಿತ್ತು. ಆದರೆ ರಾಜ್ಯವು ಹೆಚ್ಚುವರಿ ರೆಮ್ಡೆಸಿವಿರ್ ವೈಯಲ್ಸ್ಗೆ ಬೇಡಿಕೆ ಸಲ್ಲಿಸಿದ ಹಿನ್ನೆಲೆಯಲ್ಲಿ ಔಷಧ ಇಲಾಖೆಯನ್ನೂ ನಿರ್ವಹಿಸುವ ಸದಾನಂದ ಗೌಡರು ಮಧ್ಯಪ್ರವೇಶಿಸಬೇಕಾಗಿ ಬಂತು. ಹೀಗಾಗಿ ರಾಜ್ಯಕ್ಕೆ ಗುರುವಾರ ಹೆಚ್ಚುವರಿಯಾಗಿ 25,000 ರೆಮ್ಡೆಸಿವಿರ್ ವೈಯಲ್ಸ್ ಹಂಚಿಕೆಯಾಯಿತು. ಈ ವಾರದ ಬಳಕೆಗಾಗಿ ರಾಜ್ಯಕ್ಕೆ ಹಂಚಿಕೆಯಾದ ಒಟ್ಟು 50352 ವೈಯಲ್ಸ್ ರೆಮ್ಡೆಸಿವಿರಿನಲ್ಲಿ ಮುಕ್ಕಾಲು ಭಾಗವನ್ನು ಮೈಲಾನ್ ಕಂಪನಿಯೇ ಪೂರೈಸಬೇಕಿದೆ.
ಬೆಂಗಳೂರಿನ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿರುವ ಮೈಲಾನ್ ಕಂಪನಿ ಔಷಧ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ ಸದಾನಂದ ಗೌಡರು ಕಂಪನಿಯ ಎಂಡಿ ರಾಕೇಶ್ ಬೊಮ್ಜೈ ಮತ್ತವರ ಸಹಪಾಠಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು “ರಾಜ್ಯಕ್ಕೆ ಇಂದು 15000 ವೈಯಲ್ಸ್ ರೆಮ್ಡೆಸಿವಿರ್ ಬಿಡುಗಡೆ ಆಗಿದೆ. ಮೈಲಾನ್ ಕಂಪನಿಯು ಉತ್ಪಾದನೆಯನ್ನು ಹೆಚ್ಚಿಸುತ್ತಿದೆ. ಕಂಪನಿಯು ವಿವೇಚನಾಧೀಕಾರದಲ್ಲಿ ಬರುವ ಶೇಕಡಾ 30ರಷ್ಟು ಉತ್ಪಾದನೆಯಲ್ಲಿ ರಾಜ್ಯಕ್ಕೆ ಹಚ್ಚುವರಿ ರೆಮ್ಡೆಸಿವಿರ್ ವೈಯಲ್ಸ್ ಒದಗಿಸಲು ಒಪ್ಪಿಕೊಂಡಿದೆ. ಅದೇ ರೀತಿ ಅಮೆರಿಕದ ಗಿಲೀಡ್ ಸೈಯನ್ಸಸ್ ಕಂಪನಿಯಿಂದ ರೆಮ್ಡೆಸಿವಿರ್ ಉತ್ಪಾದನೆಯ ಲೈಸನ್ಸ್ ಪಡೆದಿರುವ ಭಾರತದ ಇತರ ಫಾರ್ಮಾ ಕಂಪನಿಗಳ ಜೊತೆಗೂ ಹೆಚ್ಚುವರಿ ಚುಚ್ಚುಮದ್ದು ಪೂರೈಸುವ ಬಗ್ಗೆ ಮಾತುಕತೆ ನಡೆದಿದೆ. ಹಾಗಾಗಿ ಇನ್ನೊಂದು ವಾರೊಪ್ಪತ್ತಿನಲ್ಲಿ ಈ ಚುಚ್ಚುಮದ್ದು ವಿಫುಲವಾಗಿ ಲಭ್ಯವಾಗಲಿದೆ. ಯಾರೂ ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ” ಎಂದರು.
ಪ್ರಶ್ನೆಯೊಂದಿಗೆ ಉತ್ತರಿಸಿದ ಸಚಿವರು ರೆಮ್ಡೆಸಿವಿರ್ ಕಾಳಸಂತೆ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ರಾಜ್ಯ ಸರಕಾರಗಳಿಗೆ ಸೂಚಿಸಲಾಗಿದೆ. ಕಳೆದ ಹಂಗಾಮಿನಲ್ಲಿ ರಸಗೊಬ್ಬರ ಕಾಳಸಂತೆ ಮಾಡಿದ ನೂರಕ್ಕೂ ಹೆಚ್ಚು ವಿತರಕರ ಲೈಸನ್ಸ್ ರದ್ದುಗೊಳಿಸಲಾಗಿತ್ತು. ಈ ವಿಚಾರವಾಗಿಯೂ ಕಠಿಣ ಕ್ರಮ ಜಾರಿಗೊಳ್ಳಲಿದೆ ಎಂದರು.
ಬೆಂಗಳೂರು ಕೇಂದ್ರ ಸಂಸದ ಪಿ ಸಿ ಮೋಹನ್, ಬೆಂಗಳೂರು ದಕ್ಷಿಣ ಶಾಸಕ ಕೃಷ್ಣಪ್ಪ, ಎಂಎಲ್ಸಿ ಡಾ ವೈ ಎನ್ ನಾರಾಯಣಸ್ವಾಮಿ ಉಪಸ್ಥಿತರಿದ್ದರು.