ಬೆಂಗಳೂರು: ದೊಡ್ಡಬಳ್ಳಾಪುರ ಸಹಿತ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಕೋವಿಡ್ -19 ಸೋಂಕು ಗಣನೀಯವಾಗಿ ಏರಿಕೆಯಾಗುತ್ತಿದೆ. ಮೇ, ಜೂನ್ ವೇಳೆ ಮತ್ತಷ್ಟು ದ್ವೀಗುಣವಾಗುವ ಆತಂಕ ಎದುರಾಗಿದೆ. ಈ ನಿಟ್ಟಿನಲ್ಲಿ ಕರೊನಾ ವಿರುದ್ಧ ಹೋರಾಡಲು ತಾಲ್ಲೂಕು ಆಡಳಿತ, ಆರೋಗ್ಯ ಇಲಾಖೆ ಸನ್ನದ್ಧವಾಗಿರಬೇಕು ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ ಹೇಳಿದ್ದಾರೆ.
ದೊಡ್ಡಬಳ್ಳಾಪುರ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಹಕ್ಕಿಕೊಂಡಿದ್ದ ಕೋವಿಡ್ ಮುಂಜಾಗ್ರತಾ ಕ್ರಮಗಳ ಪರಿಶೀಲನೆ ಸಭೆ ಹಾಗೂ ನೀರಿನ ಸಮಸ್ಯೆ ಕುರಿತ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಕೊರೋನಾ ಹೆಚ್ಚಾಗುತ್ತಿದ್ದು, ತಾಲ್ಲೂಕು ಹಾಗೂ ಜಿಲ್ಲೆಯಲ್ಲಿ ಬೆಡ್ ಹಾಗೂ ಆಕ್ಸಿಜನ್ ಕೊರತೆ ಉಂಟಾಗದಂತೆ ನೋಡಿಕೊಳ್ಳಲಾಗಿದೆ. ತಾಲ್ಲೂಕಿನ ಪ್ರಮುಖ ವಸತಿ ಶಾಲೆಗಳು ಹಾಗೂ ಸ್ಕೌಟ್ಸ್ ಕ್ಯಾಂಪ್ ಕೇಂದ್ರದಲ್ಲಿ ಕೋವಿಡ್ ಕೇರ್ ತೆರೆಯಲು ಸಿದ್ದತೆ ನಡೆಸಲಾಗಿದೆ. ಆಕ್ಸಿಜನ್ ಪೂರೈಕೆಗಾಗಿ ಎರಡು ಖಾಸಗಿ ಕಂಪನಿಗಳ ಜೊತೆ ಮಾತುಕತೆ ನಡೆಸಿದ್ದೇವೆ. ಇನ್ನೂ ಖಾಸಗಿ ಆಸ್ಪತ್ರೆ ಗಳು ಸರ್ಕಾರದ ಮಾರ್ಗಸೂಚಿಯಂತೆ ಶೇ.೫೦ ರಷ್ಟು ಬೆಡ್ ಗಳನ್ನು ಮೀಸಲಿಡಬೇಕು. ಇಲ್ಲವಾದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೇಸ್ ದಾಖಲಿಸಲಾಗುತ್ತದೆ ಎಂದು ಎಚ್ಚರಿಸಿದರು. ಶಾಲೆಗಳು ರಜೆ ಇರುವುದರಿಂದ ಆಯ್ದ ಶಾಲೆಗಳಲ್ಲಿ ಸ್ಲಾಬ್ ಟೆಸ್ಟಿಂಗ್ ಹಾಗೂ ವ್ಯಾಕ್ಸಿನೇಷನ್ ಕೇಂದ್ರ ತೆರೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉಪವಿಭಾಗಧಿಕಾರಿ ಅರುಳ್ ಕುಮಾರ್ ಮಾತನಾಡಿ ತಾಲ್ಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳುವವರಿಗಾಗಿ ಪ್ರತಿಯೊಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬಸ್ ವ್ಯವಸ್ಥೆ ಮಾಡಲಾಗುತ್ತಿದೆ. ಪಿಡಿಓ ಗಳು ಜನರನ್ನು ಕರೆದುಕೊಂಡು ಹೋಗಿ ಬರುವ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.
ಶಾಸಕ ವೆಂಕಟರಮಣಯ್ಯ ಮಾತನಾಡಿ ಕೋವಿಡ್ ಕೇಂದ್ರ ತೆರೆಯಲು ಸಮಾಜ ಕಲ್ಯಾಣ ಇಲಾಖೆಯಡಿಯ ಎಲ್ಲಾ ವಸತಿ ಶಾಲೆಗಳು ಹಾಗೂ ಸಮುದಾಯ ಭವನಗಳನ್ನು ಕೋವಿಡ್ ಕೇಂದ್ರಗಳನ್ನಾಗಿ ಮಾಡಲು ಸಂಪೂರ್ಣ ಸಹಕಾರ ನೀಡಲಾಗುತ್ತದೆ. ಜಿಲ್ಲಾಧಿಕಾರಿಗಳು ನಮ್ಮ ತಾಲ್ಲೂಕಿನ ಪ್ರತಿಯೊಂದು ಕೋವಿಡ್ ಆಸ್ಪತ್ರೆಗಳಲ್ಲಿ ಓರ್ವ ನುರಿತ ನೋಡಲ್ ಅಧಿಕಾರಿಯನ್ನು ನೇಮಿಸಬೇಕು, ಮತ್ತು ಸಾರ್ವಜನಿಕ ಆಸ್ಪತ್ರೆಯಲ್ಲಿ ಖಾಲಿ ಇರುವ ಸಿಬ್ಬಂದಿ ನೇಮಕಕ್ಕೆ ಕ್ರಮ ತೆಗೆದುಕೊಳ್ಳುಬೇಕು ಎಂದು ಮನವಿ ಮಾಡಿದರು. ಅಲ್ಲದೆ ನಿವೃತ್ತ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಸ್ವಯಂ ಪ್ರೇರಿತರಾಗಿ ಕೆಲಸ ಮಾಡಲು ಆಸಕ್ತಿ ಇದ್ದರೆ ತಾಲ್ಲೂಕು ಆಡಳಿತವನ್ನು ಸಂಪರ್ಕ ಮಾಡಿ ನೋಂದಣಿ ಮಾಡಿಸಿಕೊಳ್ಳಬಹುದು ಎಂದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ಯಾವೆಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ. ಒಟ್ಟು ಎಷ್ಟು ಸಿಬ್ಬಂದಿಗಳು ನೇಮಕ ಮಾಡಿಕೊಂಡಿದ್ದೀರಿ. ಎಷ್ಟು ಮಂದಿ ಅವಶ್ಯಕತೆ ಇದೆ. ಹೀಗೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ ಸರಣಿ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದ ಮುಖ್ಯ ವೈದ್ಯಾಧಿಕಾರಿ ಡಾ. ರಮೇಶ್ ಅವರಿಗೆ ಜಿಲ್ಲಾಧಿಕಾರಿ ಶ್ರೀನಿವಾಸ, ಶಾಸಕ ವೆಂಕಟರಮಣಯ್ಯ ತರಾಟೆಗೆ ತೆಗೆದುಕೊಂಡರು.