ಹಾಸನ: ಹಾಸನಾಂಬೆ ದರ್ಶನೋತ್ಸವ ಮುಕ್ತಾಯಗೊಂಡ ಬೆನ್ನಲ್ಲೇ ದೇವಾಲಯದ ಹುಂಡಿ ಹಣ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಈ ಬಾರಿ ಒಟ್ಟು ₹29.55 ಕೋಟಿ ಆದಾಯ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು ₹4 ಕೋಟಿ ಹೆಚ್ಚುವರಿ ಆದಾಯ ಬಂದಿದೆ ಎಂದು ದೇಗುಲದ ಆಡಳಿತಾಧಿಕಾರಿ ಜಗದೀಶ್ ಗಂಗಣ್ಣನವರ್ ತಿಳಿಸಿದ್ದಾರೆ.
ಹುಂಡಿಯಲ್ಲಿ ₹3.71 ಕೋಟಿ ನಗದು ಸಂಗ್ರಹವಾಗಿದ್ದರೆ, ಟಿಕೆಟ್ ಹಾಗೂ ಲಡ್ಡು ಪ್ರಸಾದ ಮಾರಾಟದಿಂದ ₹25.82 ಕೋಟಿ ಆದಾಯ ಬಂದಿದೆ. 2025ರಲ್ಲಿ ದೇಗುಲಕ್ಕೆ ₹25.59 ಕೋಟಿ ಆದಾಯ ಸಂಗ್ರಹವಾಗಿತ್ತು.
ಈ ಬಾರಿ ಒಟ್ಟು 30.06 ಲಕ್ಷ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಕಳೆದ ವರ್ಷ 25.36 ಲಕ್ಷ ಭಕ್ತರು ಆಗಮಿಸಿದ್ದರು. ಈ ಮೂಲಕ ಈ ಬಾರಿ ಸುಮಾರು 4.70 ಲಕ್ಷ ಭಕ್ತರ ಸಂಖ್ಯೆ ಹೆಚ್ಚಾಗಿದೆ.

ಭಕ್ತರು ದೇವಿಗೆ 43 ಗ್ರಾಂ ಚಿನ್ನ ಹಾಗೂ 1 ಕೆ.ಜಿ. 255 ಗ್ರಾಂ ಬೆಳ್ಳಿಯ ಆಭರಣಗಳನ್ನು ಕಾಣಿಕೆಯಾಗಿ ನೀಡಿದ್ದಾರೆ. ಹುಂಡಿಯಲ್ಲಿ ಸಿಂಗಾಪುರ, ಓಮನ್, ಬಹ್ರೇನ್, ಅಮೆರಿಕ, ಯುಎಇ ಮತ್ತು ಚೀನಾ ದೇಶಗಳ ಕರೆನ್ಸಿಗಳೂ ಪತ್ತೆಯಾಗಿವೆ.
ಹುಂಡಿ ಹಣ ಎಣಿಕೆ ಕಾರ್ಯದಲ್ಲಿ ಕಂದಾಯ ಇಲಾಖೆಯ 500 ಸಿಬ್ಬಂದಿ ಸೇರಿದಂತೆ ಸುಮಾರು 600 ಮಂದಿ ಪಾಲ್ಗೊಂಡಿದ್ದರು.
ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ 14 ದಿನಗಳ ಕಾಲ ಹಾಸನಾಂಬೆ ಉತ್ಸವ ನಡೆದಿತ್ತು. ಅಕ್ಟೋಬರ್ 30ರಿಂದ ನವೆಂಬರ್ 10ರವರೆಗೆ 12 ದಿನ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನವೆಂಬರ್ 11ರಂದು ಸಾಂಪ್ರದಾಯಿಕ ಪೂಜೆಯೊಂದಿಗೆ ದೇವಾಲಯದ ಬಾಗಿಲು ಮುಚ್ಚಲಾಯಿತು.















































































