ದಕ್ಷಿಣ ಕನ್ನಡ ಜಿಲ್ಲೆಯ ಬಹುನಿರೀಕ್ಷಿತ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ರಸಾಯನಿಕ ಹಾಗೂ ಪೆಟ್ರೋಕೆಮಿಕಲ್ಸ್ ಇಲಾಖೆಯು ಅಂತಿಮ ಒಪ್ಪಿಗೆ ನೀಡಿ ಕೇಂದ್ರದ ಶೇ. 50 ಪಾಲು ಹಣ ಬಿಡುಗಡೆಗೆ ಅಂತಿಮ ಆದೇಶ ನೀಡಿದೆ. ಕೆ.ಐ.ಎ.ಡಿ.ಬಿ. ಉಳಿಕೆ ಶೇ.50 ಪಾಲು ಹೂಡಿಕೆಯೊಂದಿಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲಿದೆ.
ಈ ಯೋಜನೆ ಕಾರ್ಯರೂಪಕ್ಕೆ ಬರಲು ಸಹಕರಿಸಿದ ಪ್ರಧಾನಿ ನರೇಂದ್ರ ಮೋದಿಜಿಯವರಿಗೆ, ಕೇಂದ್ರದ ರಸಾಯನಿಕ ಖಾತೆಯ ಸಚಿವ ಭಗವಂತ್ ಕೂಬಾರವರಿಗೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಹಾಗೂ ರಾಜ್ಯದ ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯವರಿಗೆ ದಕ್ಷಿಣ ಕನ್ನಡ ಸಂಸದರೂ ಆದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೃತಜ್ಞತೆ ಸಲ್ಲಿಸಿದ್ದಾರೆ.
ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ ಪ್ಲಾಸ್ಟಿಕ್ ಪಾರ್ಕ್ ದಕ್ಷಿಣ ಕನ್ನಡ ಜಿಲ್ಲೆಯ ಗಂಜಿಮಠದಲ್ಲಿ ಸ್ಥಾಪನೆಗೊಳ್ಳಲು ಕೇಂದ್ರದ ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್ ಇಲಾಖೆಯಿಂದ ಅಂತಿಮ ಒಪ್ಪಿಗೆ ಸಿಕ್ಕಿದೆ.
ಈ ಯೋಜನೆಯಿಂದ ಅನೇಕ ಕೈಗಾರಿಕೆಗಳು ಜಿಲ್ಲೆಗೆ ಬರಲಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಉದ್ಯೋಗಾವಕಾಶಗಳ ಸೃಷ್ಟಿಯಾಗಲಿದೆ.
— Nalinkumar Kateel (@nalinkateel) January 21, 2022
ಈ ಯೋಜನೆ ದಕ್ಷಿಣ ಕನ್ನಡ ಜಿಲ್ಲೆಗೆ ಬರಲು ಸಹಕರಿಸಿದ ಕೇಂದ್ರ ರಸಾಯನಿಕ ಹಾಗೂ ಪೆಟ್ರೋಕೆಮಿಕಲ್ಸ್ ಇಲಾಖೆಯ ಹಿಂದಿನ ಸಚಿವರಾಗಿದ್ದ ದಿವಂಗತ ಅನಂತಕುಮಾರ್, ಸದಾನಂದ ಗೌಡರು ಹಾಗೂ ಮಾನ್ ಸುಖ್ ಮಾಂಡವೀಯ ಅವರ ಸಹಕಾರವನ್ನೂ ನಳಿನ್ ಕುಮಾರ್ ಕಟೀಲ್ ನೆನಪಿಸಿಕೊಂಡಿದ್ದಾರೆ.
ಈ ಯೋಜನೆಯು ದಕ್ಷಿಣ ಕನ್ನಡ ಜಿಲ್ಲೆಯ ಗಂಜಿಮಠದ ಬಳಿ ಸುಮಾರು 104 ಎಕರೆ ಕೆ.ಐ.ಎ.ಡಿ.ಬಿ. ಪ್ರದೇಶದಲ್ಲಿ ಪ್ರಾರಂಭಗೊಳ್ಳಲಿದೆ.