ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗೂ ತಿಮಗಿಲಕ್ಕೂ ಸಂಬಂಧ ಇರಲ್ಲ ಅಂದುಕೊಂಡಿರಬಹುದು. ಆದರೆ ತಿಮಿಂಗಿಲದಿಂದ ಉತ್ಫಾದನೆಯಾದ ಕೋಟ್ಯಾಂತರ ರೂಪಾಯಿ ಮೌಲ್ಯದ ವಸ್ತುಗಳ ಡೀಲ್ ಬೆಂಗಳೂರಿನಲ್ಲೇ ನಡೆಯುತ್ತಿದೆ. ಈ ಒಂದು ಮಾಫಿಯಾ ಗ್ಯಾಂಗ್ ಮಲ್ಲೇಶ್ವರಂ ಪೊಲೀಸರ ಬಲೆಗೆ ಬಿದ್ದಿದೆ.
ಕ್ಷಿಪ್ರ ಕಾರ್ಯಾಚರಣೆಗಿಳಿದ ಮಲ್ಲೇಶ್ವರಂ ಠಾಣೆಯ ಇನ್‌ಸ್ಪೆಕ್ಟರ್ ಬಿ.ಕೆ.ಮಂಜಯ್ಯ, ಹಾಗೂ ಸಬ್ ಇನ್‌ಸ್ಪೆಕ್ಟರ್‌ಗಳಾದ ವಿನೋದ್ ಜಿರಗಾಳೆ, ಕುಮಾರಿ ಗೀತಾ ತಟ್ಟಿ ಅವರನ್ನೊಳಗೊಂಡ ಚಾಣಾಕ್ಷ ಪೊಲೀಸರ ತಂಡ ಐವರನ್ನು ಸೆರೆಹಿಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಮಾರು 17 ಕೋಟಿ ರೂಪಾಯಿ ಬೆಳೆಬಾಳಹುದೆಂದು ಅಂದಾಜಿಸಲಾದ ಸುಮಾರು 4 ಕೆ.ಜಿ. ಅಂಬರ್ ಗ್ರೀಸನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಡ್ರಗ್ಸ್ ವಿರುದ್ದದ ಕಾರ್ಯಾಚರಣೆಯಲ್ಲಿ ಯಶೋಗಾಥೆ ಬರೆದಿರುವ ಖ್ಯಾತಿಗೊಳಗಾಗಿರುವ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ವಿನೋದ್ ಜಿರಗಾಳೆ ಅವರಿದ್ದ ಪೊಲೀಸ್ ಟೀಂಗೆ ಅಂಬರ್ ಗ್ರೀಸ್ ದಂಧೆಯ ಸುಳಿವೊಂದು ಸಿಕ್ಕಿತ್ತು. ಪ್ರಸ್ತುತ ಮಲ್ಲೇಶ್ವರಂ ಠಾಣೆಯಲ್ಲಿ ಕಾರ್ಯ ನಿರ್ವಾಹಿಸುತ್ತಿರುವ ಪಿಎಸ್‌ಐಗಳಾದ ವಿನೋದ್ ಜಿರಗಾಳೆ ಹಾಗೂ ಗೀತಾ ತಟ್ಟಿ ಅವರು ಈ ಮಾಫಿಯಾ ಬಗ್ಗೆ ಮಾಹಿತಿ ಕಳೆಹಾಕಿ ಇನ್‌ಸ್ಪೆಕ್ಟರ್ ಬಿ.ಕೆ.ಮಂಜಯ್ಯ ಅವರ ಗಮನಸೆಳೆದಿದ್ದಾರೆ. ಎಸಿಪಿ ವೆಂಕಟೇಶ್ ನಾಯ್ಡು ಅವರ ಮಾರ್ಗದರ್ಶನದಲ್ಲಿ ಕ್ಷಿಪ್ರ ಕಾರ್ಯಾಚರಣೆಯ ತಂಡ ರಚಿಸಿದ ಇನ್‌ಸ್ಪೆಕ್ಟರ್ ಮಂಜಯ್ಯ ಅವರು, ವಿನೋದ್ ಜಿರಗಾಳೆ ಹಾಗೂ ಗೀತಾ ತಟ್ಟಿ ಅವರನ್ನೊಳಗೊಂಡ ತಂಡವನ್ನು ಕಾರ್ಯಾಚರಣೆಗೆ ನಿಯೋಜಿಸಿದರು.
ಅಕ್ಟೋಬರ್ 20ರಂದು ಮಧ್ಯಾಹ್ನ ಮಲ್ಲೇಶ್ವರಂನ ವೆಳ್ಳಿಪುರಂ ಬಳಿ ಖದೀಮರು ಬರುವ ಸುಳಿವರಿತ ಪೊಲೀಸರು ಈ ‘ಅಂಬರ್ ಗ್ಯಾಂಗ್’ಗೆ ಖೆಡ್ಡಾ ತೋಡಿದ್ದರು. ಅಂದುಕೊಂಡಂತೆ ಸ್ಥಳಕ್ಕೆ ಇಟಿಯೋಸ್ ಕಾರಿನಲ್ಲಿ ಆಗಮಿಸಿದ ಈ ಮಾಫಿಯಾವು ಅಂಬರ್ ಗ್ರೀಸ್ ಬಗ್ಗೆ ಡೀಲ್ ಕುದುರಿಸಿದೆ. ಈ ಡೀಲ್ ಒಂದು ಹಂತದವರೆಗೂ ಸಾಗುವಷ್ಟರಲ್ಲಿ ಖದೀಮರ ಗ್ಯಾಂಗ್ ಖಾಕಿ ಕಸ್ಟಡಿ ಸೇರಿದೆ.
ಬಂಧಿತರನ್ನು ಬೆಂಗಳೂರಿನ ಕುಂಬಳಗೋಡು ನಿವಾಸಿ ಗೋಪಾಲ, ಮಂಡ್ಯ ಜಿಲ್ಲೆ ಚಾಮುಂಡೇಶ್ವರಿ ನಗರದ ಮಧುಕುಮಾರ್, ಮಂಡ್ಯ ಜಿಲ್ಲೆ ಕೊತ್ತತ್ತಿಯ ನಂದೀಶ್, ಮಂಡ್ಯ ಜಿಲ್ಲೆ ಚೌಡೇಶ್ವರಿ ನಗರದ ಯೋಗೇಶ್ ಎಂದು ಗುರುತಿಸಲಾಗಿದೆ. ಈ ಆರೋಪಿಗಳಿಂದ ಅಂದಾಜು 17 ಕೋಟಿ ರೂಪಾಯಿ ಮೌಲ್ಯದ ಸುಮಾರು 4 ಕೆಜಿ ತೂಕದ ಅಂಬರ್ ಗ್ರೀಸ್ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ನಡುವೆ, ಗ್ಯಾಂಗ್‌ನ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿರುವ ಸಂಗತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಆ ವ್ಯಕ್ತಿ ಬಳಿ ಇನ್ನೂ 13 ಕೆ.ಜಿ.ಯಷ್ಟು ಅಂಬರ್ ಗ್ರೀಸ್ ವಸ್ತು ಇದೆ ಎಂಬ ವಿಚಾರವನ್ನು ಬಂಧಿತರು ಪೊಲೀಸರೆದುರು ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ದಾಖಲಾಗಿರುವ ಪ್ರಕರಣ ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮಹತ್ವದ ಕಾರ್ಯಾಚರಣೆಯಲ್ಲಿ ಮಲ್ಲೇಶ್ವರಂ ಠಾಣೆಯ ಪೊಲೀಸರಾದ ಮೆಹಬೂಬ್ ಸಾಬ್, ಮಲ್ಲೇಶ್ ಪಾಟೀಲ್, ನಾಗೇಶ್ ಎಂ., ಸುಭಾಷ್, ಅನಂತ್ ಕುಮಾರ್, ಅಮರೇಶ್ ಕೂಡಾ ಸಾಥ್ ನೀಡಿದ್ದರು.