ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL) ವೇಳೆ ಆಟಗಾರರ ಸುರಕ್ಷತೆ ಹಾಗೂ ಪಂದ್ಯದ ಪಾರದರ್ಶಕತೆಯನ್ನು ಕಾಪಾಡುವ ಉದ್ದೇಶದಿಂದ BCCI ಮಹತ್ವದ ಕ್ರಮ ಕೈಗೊಂಡಿದೆ. ಇತ್ತೀಚೆಗೆ ನಡೆದ ಕೆಲವು ಅಶಿಸ್ತಿನ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಮಂಡಳಿ, ಎಲ್ಲಾ 10 ಫ್ರಾಂಚೈಸಿಗಳಿಗೆ ಏಳು ಪುಟಗಳ ವಿಸ್ತೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಹೊಸ ನಿಯಮಾವಳಿಯಲ್ಲಿ ಆಟಗಾರರು ಮತ್ತು ತಂಡದ ಸಿಬ್ಬಂದಿಗೆ ಹಲವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ವಿಶೇಷವಾಗಿ ‘ಹನಿ ಟ್ರ್ಯಾಪ್’ ಬಗ್ಗೆ ಎಚ್ಚರಿಕೆ ನೀಡಿರುವ ಬಿಸಿಸಿಐ, ಅಪರಿಚಿತ ವ್ಯಕ್ತಿಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಖಾಸಗಿ ಸಂಪರ್ಕಗಳಲ್ಲಿ ಹೆಚ್ಚು ಎಚ್ಚರಿಕೆಯಿಂದ ವರ್ತಿಸುವಂತೆ ಸೂಚಿಸಿದೆ.
ತಂಡದ ವ್ಯವಸ್ಥಾಪಕರ ಪೂರ್ವಾನುಮತಿ ಇಲ್ಲದೆ ಯಾವುದೇ ಹೊರಗಿನ ವ್ಯಕ್ತಿಗಳು ಆಟಗಾರರು ಅಥವಾ ಕೋಚಿಂಗ್ ಸಿಬ್ಬಂದಿಯ ಹೋಟೆಲ್ ಕೊಠಡಿಗಳಿಗೆ ಪ್ರವೇಶಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಅಗತ್ಯ ಭೇಟಿಗಳನ್ನು ಹೋಟೆಲ್‌ನ ಸಾರ್ವಜನಿಕ ಸ್ಥಳಗಳಲ್ಲೇ ನಡೆಸಬೇಕು ಎಂದು ತಿಳಿಸಲಾಗಿದೆ.
ಹೋಟೆಲ್ ಆವರಣದಿಂದ ಹೊರಗೆ ತೆರಳುವ ಸಂದರ್ಭದಲ್ಲೂ ಆಟಗಾರರು ಮತ್ತು ಸಿಬ್ಬಂದಿ ಭದ್ರತಾ ಅಧಿಕಾರಿಗಳ ಅನುಮತಿ ಪಡೆಯಬೇಕು. ತಾವು ಎಲ್ಲಿಗೆ ಹೋಗುತ್ತಿದ್ದಾರೆ ಎಂಬ ಮಾಹಿತಿ ನೀಡುವುದು ಕಡ್ಡಾಯವಾಗಿದೆ.
ಸ್ಟೇಡಿಯಂ, ಅಭ್ಯಾಸ ಮತ್ತು ಹೋಟೆಲ್ ಪ್ರದೇಶಗಳಲ್ಲಿ ಆಟಗಾರರು, ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಮಾನ್ಯತಾ ಕಾರ್ಡ್‌ಗಳನ್ನು ಯಾವಾಗಲೂ ಧರಿಸಿರಬೇಕು ಎಂದು ಸೂಚಿಸಲಾಗಿದೆ.
ಇದರ ಜೊತೆಗೆ, ಪಂದ್ಯ ನಡೆಯುವ ವೇಳೆ ತಂಡದ ಮಾಲೀಕರು ಡಗೌಟ್‌ನಲ್ಲಿರುವ ಆಟಗಾರರು ಅಥವಾ ತಂಡದ ನಿರ್ವಹಣೆಯೊಂದಿಗೆ ಸಂವಹನ ನಡೆಸುವುದನ್ನು ನಿಷೇಧಿಸಲಾಗಿದೆ. ಪಂದ್ಯದ ಮೇಲೆ ಯಾವುದೇ ಬಾಹ್ಯ ಪ್ರಭಾವ ಬೀರದಂತೆ ತಡೆಯುವ ಉದ್ದೇಶದಿಂದ ಈ ಕ್ರಮ ಜಾರಿಗೊಂಡಿದೆ.
ಐಪಿಎಲ್‌ನಂತಹ ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್‌ನಲ್ಲಿ ಭ್ರಷ್ಟಾಚಾರ, ಫಿಕ್ಸಿಂಗ್ ಮತ್ತು ಭದ್ರತಾ ಉಲ್ಲಂಘನೆಗಳನ್ನು ತಡೆಯುವುದು ಈ ಹೊಸ ಮಾರ್ಗಸೂಚಿಗಳ ಮುಖ್ಯ ಉದ್ದೇಶವಾಗಿದೆ ಎಂದು ಬಿಸಿಸಿಐ ತಿಳಿಸಿದೆ.







































































