ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದ್ದ ಎರಡನೇ ಹಂತದ ಕೋವಿಡ್ ಲಸಿಕೆ ವಿತರಣಾ ಕಾರ್ಯಕ್ರಮವನ್ನು ಬೆಂಗಳೂರು ಗ್ರಾಮಾಂತರ ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್.ಕೆ.ನಾಯಕ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಕೋವಿಡ್-19 ಲಸಿಕೆ ಚುಚ್ಚುಮದ್ದನ್ನು ಪಡೆದರು.
ಕೋವಿಡ್-19 ಲಸಿಕೆ ಪಡೆದ ನಂತರ ಮಾತನಾಡಿದ ಅಪರ ಜಿಲ್ಲಾಧಿಕಾರಿ ಅವರು ಮೊದಲ ಹಂತದ ಲಸಿಕೆ ವಿತರಣಾ ಕಾರ್ಯಕ್ರಮದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಮೊದಲ ಆದ್ಯತೆ ನೀಡಲಾಗಿದ್ದು, ಪ್ರಸ್ತುತ ಎರಡನೇ ಹಂತದ ಲಸಿಕೆ ವಿತರಣಾ ಕಾರ್ಯಕ್ರಮ ಆರಂಭವಾಗಿದೆ, ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಕೋವಿಡ್ ಲಸಿಕೆ ಪಡೆಯುತ್ತಿದ್ದಾರೆ. ಕೋವಿಡ್-19 ಲಸಿಕೆ ಪಡೆಯುವುದರಿಂದ ಯಾವುದೇ ದುಷ್ಪರಿಣಾಮಗಳು ಉಂಟಾಗುವುದಿಲ್ಲ ಎಂದರು. ಸಾರ್ವಜನಿಕರು ಯಾವುದೇ ಊಹಾ-ಪೋಹಗಳಿಗೆ ಎಡೆಮಾಡಿಕೊಡದೇ ಲಸಿಕಾ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕು ಎಂದು ಹೇಳಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರಮೇಶ್, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ.ಶರ್ಮಿಳಾ, ದೊಡ್ಡಬಳ್ಳಾಪುರ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪರಮೇಶ್ವರ್ ಸೇರಿದಂತೆ ವೈದ್ಯಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.