ದೊಡ್ಡಬಳ್ಳಾಪುರ:-ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ಯಾವುದೇ ಶಕ್ತಿಯಿಂದಲೂ ತಡೆಯಲು ಸಾದ್ಯವಿಲ್ಲ, ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು ಅವರ ಪರ ರೋಡ್ ಶೋ ಮೂಲಕ ಮತ ಯಾಚನೆ ಮಾಡಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಬಿಜೆಪಿ ಭಿನ್ನಮತೀಯರನ್ನು ಪಕ್ಷಾಂತರ ಮಾಡಿಸಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಭೀಗುತ್ತಿದ್ದಾರೆ. ಆದರೆ ಬಿಜೆಪಿಯ ಕಾರ್ಯಕರ್ತರು ಮರಗಳಾಗಿ ಭದ್ರವಾಗಿ ಬೇರೂರಿದ್ದಾರೆ, ಕಾರ್ಯಕರ್ತರನ್ನು ಅಲುಗಾಡಿಸಲು ಸಾದ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಪಕ್ಷ ಸಾಮಾಜಿಕ ನ್ಯಾಯದ ಪರವಾಗಿದೆ, ಯಡಿಯೂರಪ್ಪ ಅವದಿಯಲ್ಲಿ ನೇಕಾರ ಸಮ್ಮಾನ್ ಯೋಜನೆ ಜಾರಿಗೊಳಿಸಿದರು, ನನ್ನ ಅವದಿಯಲ್ಲಿ ನೇಕಾರ ಸಮ್ಮಾನ್ ಯೋಜನೆಯನ್ನು ವಿದ್ಯುತ್ ಮಗ್ಗಗಳ ನೇಕಾರರಿಗೂ ವಿಸ್ತರಣೆ ಮಾಡಲಾಯಿತು, ಉದ್ಯಮದ ಅಭಿವೃದ್ಧಿಯ ಜೊತೆಗೆ ನೇಕಾರರ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ಎಲ್ಲಾ ಸ್ಥರದ ನೇಕಾರರಿಗೂ ಅನುಕೂಲ ಮಾಡಿದ್ದೇವೆ ಎಂದರು.
ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ ಎಂದ ಅವರು ಮೇ 13 ರಂದು ನೀವೆಲ್ಲರೂ ಧೀರಜ್ ಅವರ ವಿಜಯೋತ್ಸವ ಆಚರಿಸಲು ಇದೇ ರೀತಿ ಸಿದ್ದರಾಗಿರಿ ಎಂದು ಕರೆ ನೀಡಿದರು.
ಮೆರವಣಿಗೆಯಲ್ಲಿ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್, ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು ಸೇರಿದಂತೆ ಬಿಜೆಪಿ ಪಕ್ಷದ ತಾಲ್ಲೂಕು ಮತ್ತು ಜಿಲ್ಲಾ ಮುಖಂಡರು ಸೇರಿದಂತೆ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.