ಮಂಗಳೂರು; ದಕ್ಷಿಣಕನ್ನಡ ಜಿಲ್ಲೆಯಲ ಮೂವರು ನಾಯಕರು ಸಿಡಿ ಸುಳಿಯಲ್ಲಿ ಸಿಲುಕಿದ್ದಾರೆಯೇ? ವಿಧಾನಸಭಾ ಚುನಾವಣೆ ಸಂದರ್ಭದಲ್ಲೇ ಇಂಥದ್ದೊಂದು ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಈ ವಿಚಾರ ದಕ್ಷಿಣಕನ್ನಡ ಜಿಲ್ಲೆ ಬೆಳ್ತಂಗಡಿ ಸಮೀಪ ಉಜಿರೆಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಪ್ರತಿಧ್ವನಿಸಿದೆ. ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿಜೆಪಿ ನಾಯಕರ ಸಿಡಿ ವಿಚಾರ ಬಗ್ಗೆ ಪ್ರಸ್ತಾಪಿಸಿದ ವೈಖರಿ ಕುತೂಹಲ ಕೆಳುವಂತೆ ಮಾಡಿದೆ.
ದಕ್ಷಿಣಕನ್ನಡ ಜಿಲ್ಲೆಯ ಬಿಜೆಪಿಯ ಮೂವರು ನಾಯಕರು ತಮ್ಮ ವಿರುದ್ಧ ಯಾವುದೇ ಸಿಡಿ ಬರಬಾರದು ಎಂದು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ ಎಂಬ ವಿಚಾರವನ್ನು ನಮ್ಮ ಜಿಲ್ಲಾಧ್ಯಕ್ಷರು ತಿಳಿಸಿದರು. ಇಂತಹ ಪರಿಸ್ಥಿತಿ ಬಂದಿರುವುದೇಕೆ? ಬಿಜೆಪಿ ಇತಿಹಾಸ ಚರಿತ್ರೆ ದೊಡ್ಡದಿದೆ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲೆಯ ಮೂವರು ತಡೆಯಾಜ್ಞೆ ತಂದಿದ್ದಾರೆ ಎಂದು ಡಿಕೆಶಿ ಹೇಳಿದರು.
ಹಿಂದೆ ಬಾಂಬೆ ಬಾಯ್ಸ್ 6-7 ಮಂದಿ ತಡೆಯಾಜ್ಞೆ ತಂದಿದ್ದನ್ನು ಕೇಳಿದ್ದೆ. ದಕ್ಷಿಣ ಕನ್ನಡ ಜಿಲ್ಲೆಯ ನಾಯಕರೂ ಇಂದು ಕೋರ್ಟ್ ಮೊರೆ ಹೋಗಿದ್ದರೆ, ಬಿಜೆಪಿಯಲ್ಲಿ ಎಂತಹ ಹುಳುಕಿದೆ ಎಂದು ನೀವೆಲ್ಲರೂ ಆಲೋಚಿಸಬೇಕು ಎಂದು ಡಿಕೆಶಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಂಗ್ರೆಸ್ ಹಾಗೂ ಬಿಜೆಪಿ ನಡುವಣ ವ್ಯತ್ಯಾಸ ಎಂದರೆ, ಅವರು ಭಾವನೆ ಬಗ್ಗೆ ಆಲೋಚಿಸಿದರೆ, ನಾವು ಬದುಕಿನ ಬಗ್ಗೆ ಆಲೋಚಿಸುತ್ತೇವೆ. ಇಂದು ಮಧ್ಯಮ ಸಂದರ್ಶನದ ವೇಳೆ ಈ ಭಾಗದ ಬಿಜೆಪಿ ರಾಜ್ಯಾಧ್ಯಕ್ಷರ ವಿಚಾರವಾಗಿ ಕೆಲವು ಪ್ರಶ್ನೆ ಕೇಳಿದರು. ಬಿಜೆಪಿ ಸರ್ಕಾರ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯಕ್ಕೆ 10 ಲಕ್ಷ ಕೋಟಿ ಬಂಡವಾಳ ಬಂದಿದೆ ಎಂದು ಹೇಳಿದ್ದಾರೆ. ಕರಾವಳಿ, ಮಲೆನಾಡು ಪ್ರದೇಶದಲ್ಲಿ ಎಷ್ಟು ಬಂಡವಾಳ ಹೂಡಿಕೆಯಾಗಿದೆ? ಕೇವಲ 5 ಸಾವಿರ ಕೋಟಿ ಬಂಡವಾಳವನ್ನು ಈ ಭಾಗದಲ್ಲಿ ಹೂಡಿಕೆ ಮಾಡಲು ಯಾರೊಬ್ಬರೂ ಮುಂದೆ ಬಂದಿಲ್ಲ ಯಾಕೆ? ಎಂದು ಸವಾಲು ಹಾಕಿದ್ದೇನೆ ಎಂದರು.