ಮಂಗಳೂರು: ಕೋವಿಡ್ 3ನೆ ಅಲೆಯ ಸಾಧ್ಯತೆಯ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲೆಯಲ್ಲಿ ಮುಂಬರುವ ದಸರಾ ಹಬ್ಬದವರೆಗೆ ಸಾರ್ವಜನಿಕರ ಸಾಮೂಹಿಕ ಭಾಗವಹಿಸುವಿಕೆಗೆ ಅವಕಾಶ ಇಲ್ಲ. ಸಾರ್ವಜನಿಕರು ಸೇರುವಙತೆ ಹಬ್ಬ ಹರಿದಿನಗಳ ಆಚರಣೆಗೂ ಅವಕಾಶವಿಲ್ಲ.
ಕೋವಿಡ್ 3ನೇ ಅಲೆ ಸಾಧ್ಯತೆ, ಆತಂಕ ಹಿನ್ನೆಲೆಯಲ್ಲಿ ಕೇರಳ ಗಡಿಗೆ ಹೊಂದಿಕೊಂಡಿರುವ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡ
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ತುಳುನಾಡಿನ ಪ್ರಮುಖ ಆಚರಣೆಯಾದ ನಾಗರ ಪಂಚಮಿಯ ದಿನದಂದೂ ದೇವಾಲಯಗಳಲ್ಲಿ ಭಕ್ತರಿಂದ ವಿಶೇಷ ಪೂಜೆ, ಸೇವೆಗಳಿಗೆ ಅವಕಾಶವಿರುವುದಿಲ್ಲ. ಸಾಂಪ್ರದಾಯಿಕವಾಗಿ ದೇವಸ್ಥಾನಗಳ ಅರ್ಚಕರಿಂದ ನಡೆಯುವ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ. ಜಿಲ್ಲೆಯಲ್ಲಿ ನಾಗಬನ ಹಾಗೂ ಕುಟುಂಬದ ಮನೆಗಳಲ್ಲಿ ಆಚರಿಸಲಾಗುವ ಪೂಜೆಗಳನ್ನು ಕೂಡಾ ಕೋವಿಡ್ ಮಾರ್ಗಸೂಚಿಯೊಂದಿಗೆ ಯಾವುದೇ ರೀತಿಯಲ್ಲಿ ಜನ ಸಮೂಹವಾಗದಂತೆ ಜಾಗೃತಿಯೊಂದಿಗೆ ನೆರವೇರಿಸಲು ಸ್ಥಳೀಯ ಪಿಡಿಒಗಳ ಮೇಲ್ವಿಚಾರಣೆಯಲ್ಲಿ ನಡೆಸುವಂತೆ ಸೂಚಿಸಲಾಗಿದೆ.
ಸ್ವಾತಂತ್ರ ದಿನಾಚರಣೆಯು ಕೂಡಾ ನಿಗದಿತ ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಸಾರ್ವಜನಿಕರ ಭಾಗವಹಿಸುವಿಕೆ ಇಲ್ಲದೆ ನಡೆಸಲಾಗುತ್ತದೆ. ಕೃಷ್ಣ ಜನ್ಮಾಷ್ಠಮಿ, ಗಣೇಶ ಹಬ್ಬದ ಸಂದರ್ಭದಲ್ಲೂ ಸಾರ್ವಜನಿಕವಾಗಿ ಚಪ್ಪರ, ಶಾಮಿಯಾನ ಹಾಕಿಕೊಂಡು, ಮೆರವಣಿಗೆಯೊಂದಿಗೆ ಯಾವುದೇ ಕಾರ್ಯಕ್ರಮಕ್ಕೆ ಅವಕಾಶ ನೀಡದಿರಲು ಈಗಾಗಲೇ ಚಿಂತನೆ ಮಾಡಲಾಗಿದೆ ಎಂದು ಡಾ. ರಾಜೇಂದ್ರ ಕೆ.ವಿ. ತಿಳಿಸಿದರು.