ಮಂಗಳೂರು: ಪುರಾಣ ಪ್ರಸಿದ್ದ ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಈ ಬಾರಿ 50ನೇ ವರ್ಷದ ಸಾಮೂಹಿಕ ವಿವಾಹ ನೆರವೇರಲಿದೆ. ಏಪ್ರಿಲ್ 27ರಂದು ಬುಧವಾರ ಸಂಜೆ ಈ ವಿವಾಹ ವೈಭವ ನೆರವೇರಲಿದೆ. ಈ ಬಾರಿಯದ್ದು ಗೋಧೋಳಿ ಲಗ್ನ. ಅಂದರೆ 6.50ಕ್ಕೆ ಮುಹೂರ್ತ ನಿಗದಿಯಾಗಿದೆ.
ಪೂಜಾ ಕೈಂಕರ್ಯದ ಜೊತೆಯಲ್ಲೇ ಸಾಮಾಜಿಕ ಕೈಂಕರ್ಯ
ನ್ಯಾಯದಾನ, ಧರ್ಮೋತ್ಥಾನ, ದೇಗುಲಗಳ ಪುನರುತ್ಥಾನ ಹೀಗೆ ಹಲವು ಸಾಮಾಜಿಕ-ಧಾರ್ಮಿಕ ಕಾರ್ಯಗಳಲ್ಲಿ ಸಕ್ರೀಯವಾಗಿರುವ ಧರ್ಮಸ್ಥಳ ದೇಗುಲ ಸಾಮಜಿಕ ಸ್ವಾಸ್ಥ್ಯದ ಉದ್ದೇಶದಿಂದ ಸರ್ವ ಧರ್ಮ ಸಮ್ನೇಳನ ಮೂಲಕ ನಾಡಿನ ಗಮನಸೆಳೆದಿದೆ. ಅದರ ಜೊತೆಯಲ್ಲೇ ಸಾಮೂಹಿಕ ವಿವಾಹ ಕಾರ್ಯಕ್ರಮವೂ ಕೈಂಕರ್ಯ ರೂಪದಲ್ಲಿ ಸಾಗಿದೆ.
ಸಾಮಾಜಿಕ ಪಿಡುಗಿಗೆ ಬ್ರೇಕ್..
ಸಾಮಾಜಿಕ ಪಿಡುಗಾಗಿರುವ ವರದಕ್ಷಿಣೆ ಭೂತ ಅವೆಷ್ಟೋ ಕುಟುಂಬಗಳನ್ನು ಬಲಿತೆಗೆದುಕೊಂಡಿದೆ. ಈ ಪಿಡುಗನ್ನು ನಿವಾರಿಸುವ ಉದ್ದೇಶದಿಂದ ಹಾಗೂ ಆರ್ಥಿಕ ತೊಂದರೆಯಿಂದಾಗಿ ಮದುವೆಗಳು ತಪ್ಪಬಾರಂದೆಂಬ ನಿಟ್ಟಿನಲ್ಲಿ ಬಡವರಿಗೂ ನೆರವಾಗುವ ನಡೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆಯವರದ್ದು.
ಅನನ್ಯ ವಿವಾಹ ವೈಭವ..
ಬಡವರ ಜೊತೆ ಕೈಜೋಡಿಸುವ ಮಹಾ ವೈಭವ ಇದಾಗಿದೆ. ಲಕ್ಷಾಂತರ ರೂಪಾಯಿಗಳನ್ನು ಈ ಸಾಮೂಹಿಕ ವಿವಾಹಕ್ಕೆ ಡಾ.ವೀರೇಂದ್ರ ಹೆಗ್ಗಡೆಯವರು ಖರ್ಚು ಮಾಡುತ್ತಾರೆ. ಮದುವೆಯ ಸಕಲ ವೆಚ್ಚವೂ ದೇವಾಲಯದ್ದೇ. ವರನಿಗೆ ಧೋತಿ, ಶಾಲು ಮತ್ತು ವಧುವಿಗೆ ಸೀರೆ, ರವಿಕೆಕಣ ಹಾಗೂ ಮಂಗಳ ಸೂತ್ರ, ಹೂವಿನ ಹಾರ ನೀಡಲಾಗುತ್ತದೆ. ಆದರೆ ಎರಡನೇ ವಿವಾಹಕ್ಕೆ ಅವಕಾಶವಿಲ್ಲ ಎಂಬುದು ಗಮನಾರ್ಹ.
ಈ ಬಾರಿಯ ಸಾಮೂಹಿಕ ವಿವಾಹದಲ್ಲಿ ಮದುವೆಯಾಗ ಬಯಸುವವರು ಏಪ್ರಿಲ್ 15ರೊಳಗೆ ಸಕಲ ಮಾಹಿತಿ ಹಾಗೂ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು ಎಂದು ದೇವಾಲಯದ ಮೂಲಗಳು ತಿಳಿಸಿವೆ. ಹೆಚ್ಚಿನ ಮಾಹಿತಿಗಾಗಿ ಧರ್ಮಸ್ಥಳ ದೇವಾಲಯ ಕಚೇರಿಯ ದೂರವಾಣಿ ಸಂಖ್ಯರ 08256-266644 ಅಥವಾ ವಾಟ್ಸಪ್ ನಂಬರ್ 8147263422 ಮೂಲಕ ಪಡೆಯಬಹುದು.