ಮಂಗಳೂರು: ಪಕ್ಷದ ಸೇನಾನಿಗಳೆಂದರೆ ಇಂಥವರಿರಬೇಕು.. ನಾಯಕರ ಬಗೆಗಿನ ಅಭಿನವೆಂದರೆ ಹೀಗಿರಬೇಕು. ಪ್ರಸ್ತುತ ಪರಿಸ್ಥಿತಿಯಲ್ಲಿ ಜಾಗತಿಕ ನಾಯಕರ ಸಾಲಿನಲ್ಲಿ ನಿಂತಿರುವ ಭಾರತ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಬಿಜೆಪಿ ಕಾರ್ಯಕರ್ತರಿಗೆ ಅಪಾರ ಅಭಿಮಾನ. ಹಾಗಾಗಿಯೇ ನರೇಂದ್ರ ಮೋದಿಯವರು ಎರಡನೇ ಅವಧಿಯ ಎರಡು ವರ್ಷಗಳ ಆಡಳಿತವನ್ನು ಪೂರೈಸಿದ್ದು ಬಿಜೆಪಿ ಕಾರ್ಯಕರ್ತರಲ್ಲಿ ಎಂದಿಲ್ಲದ ಸಂಭ್ರಮ.
ಮೋದಿ ಆಡಳಿತದ ವರುಷದ ಹರುಷ ಮಂಗಳೂರು ಸುತ್ತಮುತ್ತಲ ಗ್ರಾಮಗಳಲ್ಲಿ ವಿಶೇಷ ಎಂಬಂತಿತ್ತು. ಮೋದಿ ಅಭಿಮಾನಿಗಳು ಸಾಮಾಜಿಕ ಕೈಂಕರ್ಯ ಮೂಲಕ ಊರು ಉದ್ಧಾರದ ಕಾರ್ಯ ಕೈಗೊಂಡು ಗಮನ ಸೆಳೆದರು.
ನರೆಂದ್ರ ಮೋದಿ ಸರ್ಕಾರ ತನ್ನ ಅಧಿಕಾರವಧಿಯ ಏಳರ ಸಂಭ್ರಮದಲ್ಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಗುಂಪು ತೆಂಕಬೆಳ್ಳೂರು ಗ್ರಾಮದ ಧನುಪೂಜೆಯಿಂದ ಕಮ್ಮಾಜೆಯ ವರೆಗಿನ ಮುಖ್ಯರಸ್ತೆಯ ಸುತ್ತ ಚರಂಡಿ ನೈರ್ಮಲಿಕರಣ ಕೆಲಸ ಮಾಡಿದೆ. ಪೊದೆ ಆವರಿಸಿ ಸಂಚಾರ ಆಯೋಗ್ಯವಾಗಿದ್ದ ರಸ್ತೆಯನ್ನು ಸಂಚಾರಯೋಗ್ಯವನ್ನಾಗಿ ಸಮಾಜಮುಖಿ ಕಾರ್ಯದ ಮೂಲಕ ಈ ಕಾರ್ಯಕರ್ತರು ಮೋದಿಯ ಅಧಿಕಾರ ಪರ್ವದ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಆಚರಿಸಿದರು. ತೆಂಕಬೆಳ್ಳೂರಿನ ದೇವದುರ್ಲಭ ಬಿಜೆಪಿ ಕಾರ್ಯಕರ್ತರ ಈ ಶ್ರಮಾದಾನ ಕಾರ್ಯದಲ್ಲಿ ಊರ ಜನರು ಪಕ್ಷ ಬೇಧ ಮರೆತು ಭಾಗವಹಿಸಿ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದರು.
ಇನ್ನೊಂದೆಡೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ, ತೆಂಕ ಬೆಳ್ಳೂರು ಬೂತ್ ಸಮಿತಿಯ ಬಿಜೆಪಿ ಕಾರ್ಯಕರ್ತರು ದೇಗುಲವೊಂದಕ್ಕೆ ಕಾಯಕಲ್ಪ ನೀಡಿ ಎಲ್ಲರ ಚಿತ್ತ ಸೆಳೆದಿದ್ದಾರೆ. ಬಿಜೆಪಿ ರಾಷ್ಟ್ರೀಯ ಅದ್ಯಕ್ಷ ಜೆ.ಪಿ.ನಡ್ಡಾ ಅವರ ‘ಸೇವಾಹೀ ಸಂಘಟನಾ’ ಎಂಬ ಮಂತ್ರದೊಂದಿಗೆ ಬಿಜೆಪಿ ತೆಂಕ ಬೆಳ್ಳೂರು ಬೂತ್ ಸಮಿತಿ ಕಾರ್ಯಕರ್ತರು ಗ್ರಾಮದೇವರಾದ ಕಾವೇಶ್ವರ ದೇವಸ್ಥಾನದ ಆವರಣಗೋಡೆ ಮರು ನಿರ್ಮಾಣ ಮಾಡಿದರು.
ಮಳೆಹಾನಿಯಿಂದ ಕುಸಿತಗೊಂಡದ್ದ ಅವರಣಗೋಡೆಯನ್ನು ಶ್ರಮಾದಾನ ಮೂಲಕ ಪುನರಪಿ ನಿರ್ಮಿಸಿದರು. ದೇಗುಲದ ಈ ಸೇವಾ ಕಾರ್ಯದಲ್ಲಿ ದೇಗುಲದ ಭಕ್ತರೂ ಭಾಗಿಯಾಗಿ ಮೋದಿ ಆಡಳಿತದ ಸಾಧನೆಯ ಹರ್ಷದಲ್ಲಿ ಭಾಗಿಯಾದರು.