ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರಲು ಹರಸಾಹಸ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಇದೀಗ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಬಿಜೆಪಿ ಭದ್ರಕೋಟೆಯನ್ನು ಬೇಧಿಸಲು ಹರಸಾಹಸ ನಡೆಸುವ ಸಂದರ್ಭದಲ್ಲಿ ಮಂಗಳೂರಿನ ಅಖಾಡದಲ್ಲಿ ಯಾವ ರೀತಿ ಸೆಣಸಾಟ ನಡೆಸಲಿದೆ ಎಂಬುದೇ ಕುತೂಹಲ.
ಈ ನಡುವೆ, ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿರುವ ಕಾಂಗ್ರೆಸ್, ಕೋಲಾರ ಮಾತ್ರವಲ್ಲ, ದಕ್ಷಿಣ ಕನ್ನಡ ಜಿಲ್ಲೆಯ ಮೂರು ಕ್ಷೇತ್ರಗಳಿಗೂ ಉಮೇದುವಾರರ ಹೆಸರುಗಳನ್ನು ಪ್ರಕಟಿಸಿಲ್ಲ. ಹಾಗಾಗಿ ಕೈ ಟಿಕೆಟ್ ಆಕಾಂಕ್ಷಿಗಳ ಎದೆಬಡಿತ ಹೆಚ್ಚಾಗಿದೆ.
ದಕ್ಷಿಣಕನ್ನಡ ಜಿಲ್ಲೆಯ ಕೆಲವು ಕ್ಷೇತ್ರಗಳಿಗೆ ಹೊಸ ಮುಖಗಳನ್ನು ಪರಿಚಯಿಸಲು ಮುಂದಾಗಿರುವ ಕಾಂಗ್ರೆಸ್ ಪಕ್ಷವು ಮೂಡುಬಿದಿರೆ ಕ್ಷೇತ್ರಕ್ಕೆ ಮಿಥುನ್ ರೈ ಹಾಗೂ ಬೆಳ್ಯಂಗಡಿಗೆ ರಕ್ಷಿತ್ ಹೆಸರನ್ನು ಪ್ರಕಟಿಸಿದೆ. ಆದರೆ, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ ಹಾಗೂ ಪುತ್ತೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಇನ್ನೂ ಅಂತಿಮಗೊಳಿಸಿಲ್ಲ. ಹಿನ್ನೆಲೆಯಲ್ಲಿ ಆ ಕ್ಷೇತ್ರಗಳ ಹುರಿಯಾಳುಗಳ ಹೆಸರುಗಳ ಘೋಷಣೆಯನ್ನು ತಡೆಹಿಡಿಯಲಾಗಿದೆ ಎಂದು ಎಐಸಿಸಿ ಮೂಲಗಳು ತಿಳಿಸಿವೆ.
ಮಂಗಳೂರು ದಕ್ಷಿಣದಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಜೆ.ಆರ್.ಲೋಬೋ, ಐವಾನ್ ಡಿಸೋಜಾ ತೀವ್ರ ಲಾಭಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಕ್ಷೇತ್ರದಲ್ಲಿ ಬಿಲ್ಲವ ಮತದಾರರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಆ ಸಮುದಾಯದ ಪ್ರಮುಖರಿಗೆ ಟಿಕೆಟ್ ನೀಡಬೇಕೆಂಬ ಒತ್ತಡವೂ ಇದೆ. ಹಾಗಾಗಿ ಕುದ್ರೋಳಿ ದೇವಾಲಯದ ಪ್ರಮುಖರಾದ ಆರ್.ಪದ್ಮರಾಜ್ ಅವರಿಗೆ ಟಿಕೆಟ್ ನೀಡುವ ಸಾಧ್ಯತೆಗಳು ಹೆಚ್ಚಿವೆ ಎನ್ನಲಾಗುತ್ತಿದೆ.

ಮಂಗಳೂರು ಉತ್ತರದಲ್ಲಿ ಇನಾಯತ್ ಆಲಿ ಭವಿಷ್ಯ ಇನ್ನೂ ನಿರ್ಧಾರವಾಗಿಲ್ಲ. ಈ ಕ್ಷೇತ್ರದಲ್ಲಿ ಇನಾಯತ್ ಆಲಿ ಹಾಗೂ ಮೋಯ್ದಿನ್ ಬಾವಾ ಅವರು ಈಗಾಗಾಲೇ ತಾವೇ ಅಭ್ಯರ್ಥಿಗಳಾಗಿ ಕಣಕ್ಕಿಳಿಸುವುದಾಗಿ ಹೇಳುತ್ತಾ ಭಾರೀ ಪ್ರಚಾರದಲ್ಲಿ ತೊಡಗಿದ್ದಾರೆ. ಇನಾಯತ್ ಆಲಿಗೆ ಟಿಕೆಟ್ ಫೈನಲ್ ಆಗಿದೆ ಎಂಬ ಮಾತುಗಳು ಕೇಳಿ ಬಂದಿತ್ತಾದರೂ ಅವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಕಾಂಗ್ರೆಸ್ ನಾಯಕರನೇಕರ ಅಕ್ಷೆಪ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ಉತ್ತರದ ಅಭ್ಯರ್ಥಿಯ ಹೆಸರನ್ನು ಘೋಷಿಸಿಲ್ಲ. ಹಾಗಾಗಿ ಇನಾಯತ್ ಆಲಿ ಹಾಗೂ ಮೊಯ್ದಿನ್ ಬಾವಾ ಪೈಕಿ ಯಾರಿಗೆ ಟಿಕೆಟ್ ಸಿಗುತ್ತದೆ ಎಂಬ ಕುತೂಹಲ ಹೆಚ್ಚಾಗಿದೆ.

ಇನ್ನೊಂದೆಡೆ ಪುತ್ತೂರು ಕ್ಷೇತ್ರದಲ್ಲಿ ಶಕುಂತಲಾ ಶೆಟ್ಟಿ ಹಾಗೂ ಅಶೋಕ್ ರೈ ಪೈಕಿ ಯಾರಿಗೆ ಟಿಕೆಟ್ ನೀಡುವುದೆಂಬ ಗೊಂದಲ ಇನ್ನೂ ಬಗೆಹರಿದಿಲ್ಲ. ಹಾಗಾಗಿ ಅಲ್ಲೂ ಕೈ ಹುರಿಯಾಳಾಗಿ ಯಾರು ಕಣಕ್ಕಿಳಿಯಬಹುದು ಎಂಬ ಕುತೂಹಲ ಹೆಚ್ಚಾಗಿದೆ. ಈ ಪೈಕಿ, ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿ ವಿರೋಧಿ ಅಲೆ ಇದೆ ಎಂಬ ಲೆಕ್ಕಾಚಾರದಲ್ಲಿ, ಬಹುಕಾಲದಿಂದಲೇ ಸ್ವತಂತ್ರವಾಗಿ ಪ್ರಚಾರ ಕೈಗೊಂಡಿರುವ ಅಶೋಕ್ ಶೆಟ್ಟಿ ಅವರಿಗೆ ಟಿಕೆಟ್ ನೀಡಿದರೆ ಗೆಲುವು ಸಾಧ್ಯವೇ ಎಂಬ ಚಿಂತನೆ ನಡೆದಿದೆ.