ಅದೇನೋ ಸಂಭ್ರಮ.. ಅದೇನೋ ಸಂತಸ.. ಬಹುಕಾಲದ ಕನಸನ್ನು ಮಹಿಳಾ ಪೊಲೀಸ್ ಅಧಿಕಾರಿ ಸಾಕಾರಗೊಳಿಸಿದಾಗ ಈ ಬಡಜನರಲ್ಲೂ ತಮ್ಮ ಬದುಕು ಪರಿಪೂರ್ಣವಾದ ಸಾರ್ಥಕ ಭಾವ..
ಮೈಸೂರು: ಕರಕುಶಲ ಕ್ಷೇತ್ರಕ್ಕೆ ಕಾಯಕಲ್ಪ ನೀಡಬೇಕೆಂಬ ಮಾತುಗಳು ಇಂದು ನಿನ್ನೆಯದಲ್ಲ. ಆದರೆ ನಿರೀಕ್ಷಿತ ಯಶಸ್ಸು ಕಾಣುವಲ್ಲಿ ಪ್ರಯತ್ನ ಸಫಲವಾಗಿಲ್ಲ. ಅಷ್ಟೇ ಅಲ್ಲ, ಕರಕುಶಲ ಕ್ಷೇತ್ರಕ್ಕೆ ಸಿರಿವಂತಿಕೆ ತುಂಬುತ್ತಿರುವ ಕುಶಲಕರ್ಮಿ ಕುಟುಂಗಳಿಗೆ ಮರೀಚಿಕೆಯಾಗಿತ್ತು. ಇದೀಗ ಈ ಕನಸು ನನಸಾಗಿದೆ.
ಕುಶಲ ಕರ್ಮಿಗಳ ಬದುಕಿನ ವಾಸಯೋಗ್ಯ ಭದ್ರತೆಗಿರಬೇಕಿದ್ದ ಹಕ್ಕು ಪತ್ರಗಳು ಮರೀಚಿಕೆ ಎಂಬಂತಿತ್ತು. ಇದೀಗ ಈ ಸವಲತ್ತು ಕಲ್ಪಿಸುವ ಪ್ರಕ್ರಿಯೆಗೆ ಮುನ್ನುಡಿ ಬರೆಯಲಾಗಿದೆ. ಇಂಥದ್ದೊಂದು ಅಪರೂಪದ ಸನ್ನಿವೇಶಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಾಕ್ಷಿಯಾಯಿತು.
ಮೈಸೂರಿನಲ್ಲಿ ನಡೆದ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಕರಕುಶಲ ಕರ್ಮಿಗಳಿಗೆ ಮೈಸೂರಿನ ಕರಕುಶಲ ನಗರ, ಮೆಟಗಲ್ಲಿ ಎಂಬಲ್ಲಿರುವ ಮನೆಗಳ ಹಕ್ಕು ಪತ್ರ ವಿತರಣೆ ನಡೆಯಿತು.
ಸುಮಾರು 26 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಯಿತು. ಕರ್ನಾಟಕ ಕರಕುಶಲ ನಿಗಮದಿಂದಲೇ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ ಸಿಂಹ, ಶಾಸಕ ನಾಗೇಂದ್ರ ನಿಗಮದ ಅಧ್ಯಕ್ಷ ಮಾರುತಿ ಮಲ್ಲಪ್ಪ ಅಶ್ಟಗಿ ಸಹಿತ ಅನೇಕ ಗಣ್ಯರು ಭಾಗವಹಿಸಿದ್ದರು.
ಕುಶಲಕರ್ಮಿಗಳ ಹಕ್ಕುಪತ್ರದ ಕನಸನ್ನು ನನಸಾಗಿಸಿದ ನಿಗಮದ ವ್ಯವಸ್ಥಾಪಕ ನಿರ್ದೇಶಕರೂ ಆದ ಐಪಿಎಸ್ ಅಧಿಕಾರಿ ಡಿ. ರೂಪಾ ಅವರು ಕರಕುಶಲ ನಿಗಮವು ಕರಕುಶಲಕರ್ಮಿಗಳ ಹಿತಕಾಪಾಡುವ ಉದ್ದೇಶದಿಂದ ಈ ಕಾರ್ಯಕ್ರಮ ಕೈಗೊಂಡಿರುವ ಉದ್ದೇಶವನ್ನು ವಿವರಿಸಿದರು. ಸುಮಾರು 10 ವರ್ಷಗಳ ಹಿಂದೆ ಭಾರತ ಸರ್ಕಾರದ ವಿಶ್ವ ಯೋಜನೆಯಡಿ ಕರಕುಶಲ ನಿಗಮದ ಜಾಗದಲ್ಲಿ ಕಟ್ಟಿಕೊಟ್ಟ ಮನೆಗಳ ಹಕ್ಕು ಪತ್ರ ವಿತರಿಸಲಾಯಿತು.








































































