ಬೆಂಗಳೂರು: ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಿರುವಂತೆಯೇ ಪರಿಸ್ಥಿತಿ ಬಗ್ಗೆ ಸರ್ಕಾರ ಎಚ್ಚೆತ್ತುಕೊಂಡಿದೆ. ಈ ಸಂಬಂಧ ಬೆಂಗಳೂರಿನಲ್ಲಿಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಜಿಲ್ಲಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆ ಕ್ಷಿಪ್ರ ಬೆಳವಣಿಗೆಗಳಿಗೆ ಮುನ್ನುಡಿ ಬರೆಯಿತು.
ಕಂದಾಯ ಸಚಿವ ಆರ್.ಅಶೋಕ್ ಸಹಿತ ಹಿರಿಯ ಮಂತ್ರಿಗಳು, ತಾಂತ್ರಿಕ ಸಲಹಾ ಸಮಿತಿಯ ಪ್ರಮುಖರೂ ಈ ಸಭೆಯಲ್ಲಿ ಭಾಗವಹಿಸಿ ಸೋಂಕು ನಿಯಂತ್ರಣ ಸಂಬಂಧ ಹೊಸ ಮಾರ್ಗಸೂಚಿ ಹೊರಡಿಸುವ ಸಲಹೆ ಮುಂದಿಟ್ಟರು. ಹಲವು ಬಿಗಿ ಕ್ರಮಗಳ ಜಾರಿ ಬಗ್ಗೆಯೂ ಸಲಹೆಗಳು ವ್ಯಕ್ತವಾಯಿತು.
ಸಭೆಯ ನಂತರ ಸುದ್ದಿಗಾರರದಿಗೆ ಮಾಹಿತಿ ಹಂಚಿಕೊಂಡ ಸಚಿವ ಆರ್.ಅಶೋಕ್, ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಿರುವ ಹಿನ್ನಲೆಯಲ್ಲಿ ಹಾಗೂ ಹೊಸ ರೂಪಾಂತರಿ ವೈರಸ್ ಆತಂಕ ಹಿನ್ನೆಲೆಯಲ್ಲಿ ಕೆಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳು:
- ಕೇರಳ, ಮಹಾರಾಷ್ಟ್ರ ಗಡಿಯಲ್ಲಿ ಕಟ್ಟೆಚ್ಚರ.
- ದಕ್ಷಿಣಕನ್ನಡ, ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳ ಗಡಿಭಾಗಗಳಲ್ಲಿ ಕಟ್ಟೆಚ್ಚರಕ್ಕೆ ಸೂಚನೆ.
- ಕೇರಳದಿಂದ ಬರುವವರಿಗೆ ಆರ್‌ಟಿಪಿಸಿಆರ್ ಕಡ್ಡಾಯ.
- ಶಾಲಾ-ಕಾಲೇಜುಗಳಲ್ಲಿ ಕೊರೋನಾ ಸೋಂಕು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸೋಂಕು ಹೆಚ್ಚಿರುವ ಕಡೆ ಭೇಟಿ ನೀಡುವಂತೆ ಡಿಸಿಗಳಿಗೆ ಸೂಚನೆ.
- ಹಾಸ್ಟೆಲ್‌ಗಳಲ್ಲಿರುವವರಿಗೆ ಎರಡೆರಡು ಬಾರಿ ಕೊರೋನಾ ಟೆಸ್ಟ್‌ಗೆ ಸೂಚನೆ.
- ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮುಂದೂಡಲು ಸಲಹೆ.
- ಶಾಲಾ-ಕಾಲೇಜುಗಳಲ್ಲಿ ಸೆಮಿನಾರ್‌ಗಳಂತಹಾ ಕಾರ್ಯಕ್ರಮಗಳಿಗೆ ಬ್ರೇಕ್.
- ಮದುವೆ ಚುನಾವಣಾ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರು ಮಾಸ್ಕ್ ಧರಿಸುವುದು ಕಡ್ಡಾಯ.
- ಕ್ರಿಸ್ಮಸ್ ಹೊಸ ವರ್ಷಾಚರಣೆ ಸಂಬಂಧ ನಿರ್ಧಾರಕ್ಕೆ ಮತ್ತೊಮ್ಮೆ ಸಭೆ ನಡೆಸಲು ತೀರ್ಮಾನ
- ವಿಮಾನ ನಿಲ್ದಾಣಗಳಲ್ಲೂ ತಪಾಸಣೆ ತೀವ್ರ. ವಿದೇಶಗಳಿಂದ ಆಗಮಿಸುವವರಿಗಾಗಿ ಬಿಗಿ ನಿಯಮ.
- ಹೋಟೇಲ್-ರೆಸ್ಟೋರೆಂಟ್‌ಗಳು, ಸಿನಿಮಾ ಹಾಲ್‌ಗಳು, ಈಜುಗೊಳ, ಸಾರ್ವಜನಿಕ ಗ್ರಂಥಾಲಯ, ಮೃಗಾಲಯಗಳು ಮತ್ತು ಜೈವಿಕ ಉದ್ಯಾನವನಗಳಲ್ಲು ಕೆಲಸ ಮಾಡುವವರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದಿರಬೇಕು.
- ವೈದ್ಯಕೀಯ ಕಾಲೇಜು, ನರ್ಸಿಂಗ್ ಕಾಲೇಜ್ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸುವುದು.
- ಸರ್ಕಾರಿ ಕಚೇರಿಗಳಲ್ಲಿ, ಮಾಲ್‌ಗಳಲ್ಲಿ ಕೆಲಸ ಮಾಡುವವರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆಯಬೇಕು.
- ಸರ್ಕಾರಿ ಕಚೇರಿ, ಮಾಲ್‌ಗಳಲ್ಲಿಯೇ ಲಸಿಕೆ ನೀಡಲು ವ್ಯವಸ್ಥೆ ಕಲ್ಪಿಸುವುದು
- ಮುಂದಿನ ಮೂರು-ನಾಲ್ಕು ದಿನಗಳಲ್ಲಿ ಪರಿಸ್ಥಿತಿ ನೋಡಿ ಮುಂದಿನ ಕ್ರಮ ಕೈಗೊಳ್ಳಲು ತೀರ್ಮಾನ.