ಮಂಗಳೂರು: ತುಳು ಸಿನಿಮಾದಲ್ಲಿ ನವನವೀನ ಪ್ರಯೋಗ ಮೂಲಕ ಹೊಸತನಕ್ಕೆ ಸಾಕ್ಷಿಯಾಗುತ್ತಿರುವ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ಅವರು ಇದೀಗ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ.
‘ಬಣ್ಣ ಬಣ್ಣದ ಬದುಕು’ ಕನ್ನಡ ಚಿತ್ರದ ನಂತರ ಸ್ಯಾಂಡಲ್‌ವುಡ್, ಕೋಸ್ಟಲ್‌ವುಡ್‌ನಲ್ಲಿ ಬ್ಯುಸಿಯಾಗಿರುವ ಇಸ್ಮಾಯಿಲ್ ಮೂಡುಶೆಡ್ಡೆ ಅವರು, ಪ್ರಸ್ತುತ ‘ಭೋಜರಾಜ್ MBBS’ ತುಳು ಸಿನಿಮಾ ಮಾಡುತ್ತಿದ್ದಾರೆ. ಖ್ಯಾತ ಹಾಸ್ಯ ನಟ ಭೋಜರಾಜ್ ವಾಮಂಜೂರು ಅವರು ನಾಯಕನಾಗಿ ನಟಿಸಿರುವ ಈ ಸಿನಿಮಾದಲ್ಲಿ ದೇವದಾಸ್ ಕಾಪಿಕ್ಕಾಡ್, ವಿಜಯಕುಮಾರ್ ಕೊಡಿಯಾಲ್‌ಬೈಲ್ ಸಹಿತ ದಿಗ್ಗಜ ನಟರು ಒಟ್ಟಾಗಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಸುಮಾರುವ 30 ವರ್ಷ ಹಳೆಯ ‘ದಾನೆ ಪೊಣ್ಣೇ..’ ಹಾಡನ್ನು ಬಳಸಿ ವಿಶೇಷತೆಯನ್ನು ಹೆಚ್ಚಿಸಿದ್ದಾರೆ.
ವರ್ಷಗಳ ಹಿಂದೆ ‘ಪಮ್ಮಣ್ಣ ದಿ ಗ್ರೇಟ್’ ತುಳು ಚಿತ್ರದಲ್ಲಿ ಮೂರು ದಶಕದ ಹಿಂದಿನ ಸೂಪರ್ ಹಿಟ್ ‘ಮೊಕೆದ ಸಿಂಗಾರಿ..’ ಹಾಡನ್ನು ಬಳಸಿ ಶಹಬ್ಬಾಸ್‌ಗಿರಿ ಗಿಟ್ಟಿಸಿಕೊಂಡಿದ್ದರು. ಇದೀಗ ಅಷ್ಟೇ ಹಳೆಯದಾದ ‘ದಾನೆ ಪೊಣ್ಣೇ..’ ಹಾಡಿಗೆ ಆಧುನಿಕ ಸಂಗೀತ ಸ್ಪರ್ಶ ನೀಡಿ ಅದಕ್ಕೆ ನಟ ಭೋಜರಾಜ್ ವಾಮಂಜೂರು ಹಾಗೂ ನಟಿ ನವ್ಯಾ ಪೂಜಾರಿ ಅವರಿಂದ ಸ್ಟೆಪ್ ಹಾಕಿಸಿ ಎಲ್ಲರ ಕುತೂಹಲವನ್ನು ಹೆಚ್ಚಿಸಿದ್ದಾರೆ.
ಈ ಹಾಡು 35 ವರ್ಷದ ಹಿಂದಿನ ‘ಬೊಳ್ಳಿ ದೋಟ’ ಚಿತ್ರದ ಹಾಡಾಗಿತ್ತು. ರಾಗ್ ದೇವ್ ಚರಣ್ ರ ಅಂದಿನ ಸಂಗೀತಕ್ಕೆ ದಕ್ಕೆ ಬಾರದಂತೆ, ಇದೀಗ ಅದೇ ಹಾಡಿಗೆ ರಾಕಿಸೋನು ಅವರು ಮರು ಸಂಗೀತ ನೀಡಿದ್ದಾರೆ. ಸಮದ್ ಗಡಿಯಾರ್ ಮತ್ತು ಮಂಜುಶ್ರೀ ಕಾರ್ತಿಕೇಯರ ಕಂಠದಲ್ಲಿ ಈ ಹಾಡು ಮೂಡಿ ಬಂದಿದೆ.