-
4 ಕಂದಾಯ ವಿಭಾಗಕ್ಕೆ 10 ಕ್ರಯೋಜೆನಿಕ್ ಆಮ್ಲಜನಕ ಟ್ಯಾಂಕರ್
-
ಕರಾವಳಿ ವಿಭಾಗಕ್ಕೆ ಪ್ರತ್ಯೇಕ 2 ಟ್ಯಾಂಕರ್
-
10 ಜಿಲ್ಲಾ ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳ ಅಳವಡಿಕೆ
-
1000 ಆಮ್ಲಜನಕ ಸಾಂದ್ರಕಗಳ ಸಂಗ್ರಹಣೆ
-
ಹಟ್ಡಿ ಗೋಲ್ಡ್ ಮೈನ್ಸ್ ನಲ್ಲಿ ನರ್ಸಿಂಗ್ ಕಾಲೇಜು ಸ್ಥಾಪನೆ
ಬೆಂಗಳೂರು- ಕೋವಿಡ್ -19 ಎರಡನೇ ಅಲೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಸೋಂಕಿತರ ರಕ್ಷಣೆಗೆ ಧಾವಿಸಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯು
‘ಅಗತ್ಯವಿರುವ ಸೌಲಭ್ಯಗಳನ್ನು’ ಕಲ್ಪಿಸಲು ಮುಂದೆ ಬಂದಿದೆ.
ಶನಿವಾರ ವಿಕಾಸಸೌಧದಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ನಿದೇರ್ಶಕ ಪಿ.ಆರ್ ರವೀಂದ್ರ ಸೇರಿದಂತೆ ಮತ್ತಿತರ ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಈ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು.
ಪ್ರಮುಖವಾಗಿ 10 ಕ್ರಯೋಜೆನಿಕ್ ಆಮ್ಲಜನಕ ಟ್ಯಾಂಕರ್ ಗಳನ್ನು ಪ್ರತಿ ನಾಲ್ಕು ಕಂದಾಯ ವಿಭಾಗಗಳಿಗೆ 2 ಟ್ಯಾಂಕರ್‌ಗಳನ್ನು ನೀಡಲು ಸಚಿವರು ಸೂಚನೆ ನೀಡಿದರು. ಇದರಲ್ಲಿ ಕರಾವಳಿ ಪ್ರದೇಶಕ್ಕೆ 2 ಟ್ಯಾಂಕ್‌ಗಳನ್ನು ನೀಡಲಾಗುವುದು.ಇದರ ಜವಾಬ್ದಾರಿಯನ್ನು ಪ್ರಾದೇಶಿಕ ಆಯುಕ್ತರಿಗೆ ನೀಡಲಾಗಿದೆ. ಇದರ ಜೊತೆಗೆ 10 ಜಿಲ್ಲಾ ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಅಳವಡಿಸಲಾಗುತ್ತದೆ. ಪ್ರತಿ ನಾಲ್ಕು ಕಂದಾಯ ವಿಭಾಗಗಳಿಗೆ 2 ಆಸ್ಪತ್ರೆ, ಕರಾವಳಿ ಪ್ರದೇಶಕ್ಕೆ 2 ಆಸ್ಪತ್ರೆಗಳಿಗೆ ಆಮ್ಲಜನಕ ಉತ್ಪಾದನಾ ಘಟಕಗಳನ್ನು ನೀಡಲು ಸಚಿವರು ಸೂಚನೆ ನೀಡಿದರು.
ಆರೋಗ್ಯ ಇಲಾಖೆಯೊಂದಿಗೆ ಸಮಾಲೋಚಿಸಿ ಗಣಿ ಮತ್ತು ಭೂವಿಜ್ಞಾನ ವಿಭಾಗದ ಸಮಿತಿಯು ಆಸ್ಪತ್ರೆ ಗುರುತಿಸುವ ಹೊಣೆಗಾರಿಕೆಯನ್ನು ಸಭೆ ನೀಡಿದೆ. ಇನ್ನು ಗಣಿ ಇಲಾಖೆಯಿಂದ 1000 ಆಮ್ಲಜನಕ ಸಾಂದ್ರಕಗಳನ್ನು ಸಂಗ್ರಹಿಸಿ ಅವುಗಳನ್ನು ಎಲ್ಲಾ ಜಿಲ್ಲೆಗಳಿಗೆ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ಸಚಿವರು ನಿದೇಶ೯ನ ನೀಡಿದರು.
ಹೆಚ್ಚಿನ ಸಂಖ್ಯೆಯ ಆಕ್ಸಿಮೀಟರ್‌ಗಳನ್ನು ಸಂಗ್ರಹಿಸಿ ಇವುಗಳನ್ನು ಗ್ರಾಮ ಪಂಚಾಯಿತಿ ಆರೋಗ್ಯ ಸಮಿತಿಗಳಿಗೆ ನೀಡಲಾಗುವುದು. ಇದನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೀಡಿದರೆ, ಗ್ರಾಮಸ್ಥರಿಗೆ ಆಮ್ಲಜನಕದ ಶುದ್ಧತ್ವವನ್ನು ನಿಯಮಿತವಾಗಿ ಪರಿಶೀಲಿಸಬಹುದು ಎಂದು ನಿರಾಣಿ ಅವರು ಸಲಹೆ ಮಾಡಿದರು.
ರಾಯಚೂರು ಜಿಲ್ಲೆ ಲಿಂಗಸೂರು ತಾಲ್ಲೂಕಿನಲ್ಲಿರುವ ಹಟ್ಟಿ ಗೋಲ್ಡ್ ಮೈನ್ಸ್ ಕ್ಯಾಂಪ್‌ಸ್ ನಲ್ಲಿ ಆಸ್ಪತ್ರೆಯಲ್ಲಿ ನರ್ಸಿಂಗ್ ಕಾಲೇಜು ಸ್ಥಾಪಿಸಿಸಲು ತೀಮಾ೯ನಿಸಲಾಗಿದೆ. ಇದರಿಂದ ರಾಯಚೂರು ಜಿಲ್ಲೆಯ ಪ್ಯಾರಾ-ಮೆಡಿಸಿನ್ ಮತ್ತು ದಾದಿಯರಿಗೆ ಹೆಚ್ಚಿನ ಅನುಕೂಲವಾಗಲಿದ್ದು ಈ ಆಸ್ಪತ್ರೆಯಲ್ಲಿ ವಿಶೇಷ ಆಮ್ಲಜನಕ ಜನರೇಟರ್ ಸ್ಥಾವರವನ್ನು ಸ್ಥಾಪಿಸಲು ನಿರಾಣಿ ಅವರು ಸೂಚಿಸಿದರು.
ಹೀಗೆ ಹತ್ತು ಹಲವು ಸಮಾಜಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಸಂಕಷ್ಟದ ಸಮಯದಲ್ಲಿ ‘ಸಾಮಾಜಿಕ ಕಳಕಳಿ’ ಮಾಡಲಿದೆ ಎಂಬುದನ್ನು ತೋರಿಸಿಕೊಡುವಂತೆ ನಿರಾಣಿ ಅವರು ಅಧಿಕಾರಿಗೊ ತಾಕೀತು ಮಾಡಿದರು.
ಯಾವ ಯಾವ ಜಿಲ್ಲೆಗಳಲ್ಲಿ ಅಗತ್ಯ ಸೌಲಭ್ಯಗಳ ಕೊರತೆ ಇದೆಯೋ ಅಂತಹ ಕಡೆ ಮೊದಲ ಆದ್ಯತೆಯಾಗಿ ಹೆಚ್ಚಿನ ಗಮನ ಹರಿಸಬೇಕು. ಸೋಂಕಿತರ ಪ್ರಾಣ ರಕ್ಷಣೆಗೆ ಇಲಾಖೆ ವತಿಯಿಂದ ಎಲ್ಲಾ ಕ್ರಮಗಳನ್ನು ತೆಗೆದುಕೊಳುವಂತೆ ಹೇಳಿದರು. ಹೆಚ್ಚು ಸೋಂಕು ಇರುವ ಜಿಲ್ಲೆಗಳಿಗೆ ‘ವಿಶೇಷ ಗಮನ’ ನೀಡಬೇಕು. ಇಲಾಖೆ ವತಿಯಿಂದ ಏನೇನು ಕಲ್ಪಿಸಲು ಸಾಧ್ಯವಿದೆಯೋ ಅವೆಲ್ಲವನ್ನೂ ಮಾಡಿಕೊಡಬೇಕೆಂದು ನಿರಾಣಿ ಅವರು ಸಲಹೆ ಮಾಡಿದರು.