ಪಣಜಿ: ಕಾಂಗ್ರೆಸ್ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ, ಸತೀಶ್ ಶರ್ಮಾ ವಿಧಿವಶರಾಗಿದ್ದಾರೆ.
ರಾಷ್ಟ್ರ ರಾಜಕಾರಣದಲ್ಲಿ ಕ್ಯಾಪ್ಟನ್ ಸತೀಶ್ ಶರ್ಮಾ ಎಂದೇ ಗುರುತಾಗಿದ್ದ ಅವರು, ಗಾಂಧಿ ಕುಟುಂಬಕ್ಕೆ ಆಪ್ತರಾಗಿದ್ದರು. 73 ವರ್ಷ ಪ್ರಾಯದ ಸತೀಶ್ ಶರ್ಮಾ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಬುಧವಾರ ರಾತ್ರಿ ಅವರು ಕೊನೆಯಿಸಿರೆಳೆದಿದ್ದಾರೆಂದು ಕುಟುಂಬದ ಮೂಲಗಳು ಮಾಹಿತಿ ನೀಡಿವೆ.
ಕ್ಯಾಪ್ಟನ್ ಸತೀಶ್ ಶರ್ಮಾ ಅವರು ಆಂದ್ರಪ್ರದೇಶ ಮೂಲದವರಾಗಿದ್ದರೂ ರಾಯ್ ಬರೇಲಿ ಮತ್ತು ಅಮೇಥಿ ಕ್ಷೇತ್ರಗಳಿಂದ ಗೆದ್ದು ಮೂರು ಬಾರಿ ಲೋಕಸಭಾ ಸದಸ್ಯರಾಗಿದ್ದರು.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ನಿಕಟವರ್ತಿಯಾಗಿದ್ದ ಕ್ಯಾಪ್ಟನ್ ಸತೀಶ್ ಶರ್ಮಾಾ ಮೂಲತಃ ಪೈಲೆಟ್. ರಾಜೀವ್ ನಂಟು ಅವರನ್ನು ರಾಜಕೀಯಕ್ಕೆ ಕರೆತಂದಿತ್ತು. 1993ರಿಂದ 1996ರವರೆಗೆ ಪಿವಿ ನರಸಿಂಹ ರಾವ್ ಅವರು ಪ್ರಧಾನಿಯಾಗಿದ್ದಾಗ ಸತೀಶ್ ಶರ್ಮಾ ಅವರು ಪೆಟ್ರೋಲಿಯಂ ಖಾತೆ ಸಚಿವರಾಗಿದ್ದರು.