ಬೆಂಗಳೂರು: ತೈಲ ದರ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು ಜನರ ಜೇಬಿಗೆ ಕತ್ತರಿ ಬೀಳುತ್ತಿದೆ. ಈ ಬೆಳವಣಿಗೆ ಬಗ್ಗೆ ದೇಶವ್ಯಾಪಿ ಆಕ್ರೋಶದ ಅಲೆ ಎದ್ದಿದೆ. ಅದರಲ್ಲೂ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿಚಾರವನ್ನು ಮುಂದಿಟ್ಟು ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಇದೇ ವೇಳೆ, ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಕಡಿತಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ. ರಾಜ್ಯ ಸರ್ಕಾರ ಪೆಟ್ರೋಲ್ ಡೀಸೆಲ್ ಮೇಲಿನ ತೆರಿಗೆ ಕಡಿತ ಮಾಡಿದಲ್ಲಿ ಇತರ ರಾಜ್ಯಗಳಿಗಿಂತ ತೈಲ ದರ ಕಡಿಮೆಯಾಗಬಹುದು ಎಂದು ಪ್ರದೇಶ ಕಾಂಗ್ರೆಸ್ ಉಸ್ತುವಾರಿ ನಾಯಕ ರಂದೀಪ್ ಸುರ್ಜೇವಾಲಾ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ 9 ದಿನಗಳಿಂದ ಹೆಚ್ಚುತ್ತಲೇ ಇದೆ. ರಾಜಸ್ಥಾನದಲ್ಲಿ ವ್ಯಾಟ್ ರೇಟ್ ಕಡಿಮೆ ಆಗಿದೆ. ಆದರೆ ಕರ್ನಾಟಕದಲ್ಲಿ ರೇಟ್ ಕಡಿಮೆ ಮಾಡಿಲ್ಲ ಎಂದು ಗಮನಸೆಳೆದಿದ್ದಾರೆ.
ಅಡುಗೆ ಸಿಲಿಂಡರ್ ದರ ರೂ. 770 ಆಗಿದೆ. ಪ್ರತಿ ಸಿಲಿಂಡರ್ ಮೇಲಿನ ದರವನ್ನು ರೂ.175 ಹೆಚ್ಚು ಮಾಡಲಾಗಿದೆ. ಇದರಿಂದ ಜನಸಾಮಾನ್ಯರಿಗೆ ಕಷ್ಟವಾಗುತ್ತದೆ ಎಂದು ಅವರು ಹೇಳಿದ್ದಾರೆ.