ಬೆಂಗಳೂರು: ರಾಜ್ಯ ಬಿಜೆಪಿಯಲ್ಲೀಗ ಬಂಡಾಯದ ರಣಕಹಳೆ ಮೋಳಗಲಾರಂಭಿಸಿದೆ. ಕೆಲವು ದಿನಗಳ ಹಿಂದೆ ಸಚಿವ ಯೋಗೇಶ್ವರ್ ಅವರು ದೆಹಲಿಗೆ ತೆರಳಿ ವರಿಷ್ಠರಿಗೆ ದೂರು ತಲುಪಿಸಿ ಸಂಚಲನ ಸೃಷ್ಟಿಸಿದ್ದರು. ಅಷ್ಟೇ ಅಲ್ಲ, ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಆಡಳಿತದಲ್ಲಿ ಸಿಎಂ ಪುತ್ರ ವಿಜಯೇಂದ್ರರ ಹಸ್ತಕ್ಷೇಪ ಬಗ್ಗೆಯೂ ಆಕ್ರೋಶ ಹೊರಹಾಕಿದ್ದರು.
ಅಂದಿನಿಂದ ಬಿಎಸ್‌ವೈ ಆಪ್ತ ರೇಣುಕಾಚಾರ್ಯ ಅವರು ಎದುರಾಳಿ ಶಾಸಕರ ವಿರುದ್ದ ವಾಗ್ದಾಳಿ ನಡೆಸುತ್ತಲೇ ಇದ್ದಾರೆ.
ಈ ನಡುವೆ, ಕರಾವಳಿ ಶಾಸಕ ಸುನಿಲ್ ಕುಮಾರ್ ಅವರ ಆಕ್ರೋಶ ಕೂಡಾ ಬಿಜೆಪಿ ನಾಯಕತ್ವದ ಮೇಲೆ ಇನ್ನೂ ಹಲವರಲ್ಲಿ ಅಸಮಾಧಾನ ಇದೆ ಎಂಬುದನ್ನು ಅನಾವರಣ ಮಾಡಿದೆ.ಆಡಳಿತ ಪಕ್ಷ ಬಿಜೆಪಿಯ ಮುಖ್ಯ ಸಚೇತಕರೂ ಆಗಿರುವ, ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಈ ಕುರಿತು ಮಾಡಿರುವ ಟ್ವೀಟ್ ಕಮಲ ಪಾಲಯದಲ್ಲಿನ ವಿದ್ಯಮಾನಗಳಿಗೆ ರೋಚಕತೆಯನ್ನು ತುಂಬಿದೆ.
ನಮಗೂ ಹೇಳಲು ಹಲವು ವಿಷಯಗಳಿವೆ. ಇದಕ್ಕಾಗಿ ವ್ಯವಸ್ಥೆ ಮಾಡಿ ಎಂದು ಸುನಿಲ್ ಕುಮಾರ್ ಅವರು ವರಿಷ್ಠರನ್ನೇ ಕೋರಿರುವ ನಡೆ ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ. ಈ ಕುರಿತಂತೆ ಅವರು ಮಾಡಿರುವ ಟ್ವೀಟ್ ಬಹಳಷ್ಟು ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ.
ಕಳೆದ 3 ದಿನದಿಂದ ಮಾಧ್ಯಮದಲ್ಲಿ ಬರುತ್ತಿರುವ ಹೇಳಿಕೆಗಳು ಪಕ್ಷದ ಹಿತದೃಷ್ಟಿಯಿಂದ ಒಳಿತಲ್ಲ. ಈ ಅಭಿಪ್ರಾಯಗಳೇ ಎಲ್ಲಾ ಶಾಸಕರ, ಕಾರ್ಯಕರ್ತರ ಅಭಿಪ್ರಾಯ ಆಗುವುದಿಲ್ಲ. ನಮ್ಮ ಅಭಿಪ್ರಾಯಗಳನ್ನು ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲವಾದ್ದರಿಂದ ಪಕ್ಷದ ವರಿಷ್ಠರು ಅಭಿಪ್ರಾಯ ಆಲಿಸಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂದವರು ಆಗ್ರಹಿದ್ದಾರಲ್ಲದೆ, ಇದನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಅವರಿಗೆ ಟ್ಯಾಗ್ ಮಾಡಿದ್ದಾರೆ.
ಕಳೆದ 3 ದಿನದಿಂದ ಮಾಧ್ಯಮದಲ್ಲಿ ಬರುತ್ತಿರುವ ಹೇಳಿಕೆಗಳು ಪಕ್ಷದ ಹಿತದೃಷ್ಟಿಯಿಂದ ಒಳಿತಲ್ಲ.ಈ ಅಭಿಪ್ರಾಯಗಳೇ ಎಲ್ಲಾ ಶಾಸಕರ, ಕಾರ್ಯಕರ್ತರ ಅಭಿಪ್ರಾಯ ಆಗುವುದಿಲ್ಲ. ನಮ್ಮ ಅಭಿಪ್ರಾಯಗಳನ್ನು ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲವಾದ್ದರಿಂದ ಪಕ್ಷದ ವರಿಷ್ಠರು ಅಭಿಪ್ರಾಯ ಆಲಿಸಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕು. @nalinkateel @CTRavi_BJP
— Sunil Kumar Karkala (Modi Ka Parivar) (@karkalasunil) June 8, 2021