ಬೆಂಗಳೂರು: ಬಿಜೆಪಿ ಶಾಸಕ ಸಿ.ಎಂ ಉದಾಸಿ ವಿಧಿವಶರಾಗಿದ್ದಾರೆ. ಉತ್ತರ ಕರ್ನಾಟಕದ ಹಿರಿಯ ರಾಜಕಾರಣಿ, ಮಾಜಿ ಸಚಿವ ಸಿ.ಎಂ.ಉದಾಸಿ ಅವರು ಅನಾರೋಗ್ಯ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಅವರಿಗೆ 85 ವರ್ಷ ಹರೆಯ.
ಸಂಸದ ಶಿವಕುಮಾರ ಉದಾಸಿಯವರ ತಂದೆ ಸಿ.ಎಂ.ಉದಾಸಿಯವರು ಹಾವೇರಿ ಜಿಲ್ಲೆ ಹಾನಗಲ್ ಕ್ಷೇತ್ರದ ಶಾಸಕರಾಗಿ ಜನಾನುರಾಗಿಯಾಗಿದ್ದರು.
ಬಿಎಸ್‌ವೈ ಅವರಿಗೆ ಆಪ್ತರಾಗಿರುವ ಉದಾಸಿ ಅವರು, ಯಡಿಯೂರಪ್ಪ ಅವರೊಂದಿಗೆ ಕೆಜೆಪಿ ಸೇರಿದ್ದರು. ಬಳಿಕ ಬಿಎಸ್‌ವೈ ಜೊತೆ ಮಾತೃಪಕ್ಷಕ್ಕೆ ಮರಳಿದ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಗಳಿಸಿದ್ದರು.
ಸಿ.ಎಂ.ಉದಾಸಿ ನಿಧನಕ್ಕೆ ಗಣ್ಯರನೇಕರು ಕಂಬನಿ ಮಿಡಿದಿದ್ದಾರೆ.