ಉಡುಪಿ: ಇವರು ರಾಜಕಾರಣಿ ಅಲ್ಲ, ಜನಪ್ರತಿನಿಧಿಯೂ ಅಲ್ಲ. ಆದರೂ ಜನಹಿತ ಸೇವೆ.. ಇಲ್ಲಿ ಫಲಾನುಭವಿಗಳಾಗಿರುವವರು ಇವರ ಕಂಪನಿ ಉದ್ಯೋಗಿಗಳೂ ಅಲ್ಲ. ಆದರೂ ಅವರ ಕುಟುಂಬದ ಹಿತಕ್ಕಾಗಿ ಇವರ ಕೈಂಕರ್ಯ..
ಹೌದು ಈ ಪೂಜಾರಿ ದೇವರನ್ನು ಪೂಜಿಸುವಷ್ಟೇ ಮಹತ್ವವನ್ನು ಜನರ ಹಿತದತ್ತ ಗಮಹರಿಸುವುದಕ್ಕೂ ನೀಡುತ್ತಿದ್ದಾರೆ. ತಾನು ಹುಟ್ಟಿದ ಸಮುದಾಯದ ಹೆಸರಿನಿಂದಾಗಿ ‘ಪೂಜಾರಿ’ ಎಂದು ಗುರುತಾಗುವುದಕ್ಕಿಂತಲೂ ಜನರಲ್ಲೇ ದೇವರನ್ನು ಕಾಣುತ್ತಿರುವುದರಿಂದಾಗಿ ‘ಪೂಜಾರಿ’ ಎಂದೆನಿಸಿದ್ದೇ ಹೆಚ್ಚು.
ಗೋವಿಂದ ಬಾಬು ಪೂಜಾರಿಯವರು ದೇಶ ಕಂಡ ಖ್ಯಾತ ಉದ್ಯಮಿ. ಆಹಾರೋದ್ದಿಮೆ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಗೋವಿಂದ ಬಾಬು ಪೂಜಾರಿಯವರು ಬಡತನದ ಕಹಿ ಸನ್ನಿವೇಶಗಳನ್ನು ಅನುಭವಿಸಿ, ಕಷ್ಟ ಸಂಕಷ್ಟಗಳನ್ನು ಮೆಟ್ಟಿ ನಿಂತು ಉದ್ಯಮಿಯಾಗಿ ಬೆಳೆದವರು. ಹಾಗಾಗಿ ಬಡತನದ ಬೇಗೆಯ ಅನುಭವದಿಂದಾಗಿ ಎಲ್ಲರ ನೋವಿನಲ್ಲೂ ಭಾಗಿಯಾಗುತ್ತಿದ್ದಾರೆ.
ಕೊರೋನಾ ಸೋಂಕಿನ ಸಂಕಟ ಕಾಲದಲ್ಲಿ ಕರಾವಳಿ ಜಿಲ್ಲೆಯ ಸಾವಿರಾರು ಕುಟುಂಬಗಳ ನೋವಿಗೆ ಈ ಗೋವಿಂದ ಬಾಬು ಪೂಜಾರಿಯವರು ಸ್ಪಂದಿಸುತ್ತಿದ್ದು, ಈ ಸಮಾಜಹಿತ ಕೈಂಕರ್ಯದಿಂದಾಗಿ ಎಲ್ಲೆಡೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ.
ಇವರು ಮೂಲತಃ ಕರಾವಳಿ ಜಿಲ್ಲೆಯ ಬೈಂದೂರಿನವರು. ಒಂದಷ್ಟು ಮೀನುಗಾರರ ಸಮೂಹ, ಬಹಳಷ್ಟು ಹಿಂದುಳಿದ ವರ್ಗದವರಿರುವ ಹಳ್ಳಿಗಳ ಸೀಮೆಯಲ್ಲಿ ಇವರ ಹೆಸರು ಜನಜನಿತ. ಲಾಕ್‌ಡೌನ್ ಸಂದರ್ಭದಲ್ಲಿ ತನ್ನೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತವರೂರು ಪರ್ಯಟನೆ ಕೈಗೊಂಡ ಗೋವಿಂದ ಬಾಬು ಪೂಜಾರಿಯವರು, ಜನರ ಸಂಕಷ್ಟ ಕಂಡು ಮಮ್ಮಲ ಮರುಗಿದ್ದಾರೆ. ತಾವು ಜನಸೇವೆಯ ಉದ್ದೇಶದಿಂದ ಸ್ಥಾಪಿಸಿರುವ ಸಾಮಾಜಿಕ ಸಂಸ್ಥೆ ‘ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್’ ವತಿಯಿಂದ ಸಾವಿರಾರು ಕುಟುಂಬಗಳಿಗೆ ಆಹಾರ ಕಿಟ್, ವೈದ್ಯಕೀಯ ಪರಿಕರ, ಸೋಂಕು ತಡೆಯುವ ಸ್ಯಾನಿಟೈಸರ್, ಮಾಸ್ಕ್ ಇತ್ಯಾದಿಗಳನ್ನು ನೀಡಿ ನೆರವಾಗಿದ್ದಾರೆ. ನೂರಾರು ಕುಟುಂಬಗಳಿಗೆ ಆರ್ಥಿಕ ನೆರವನ್ನು ನೀಡಿ ಜನಪ್ರತಿನಿಧಿಗಳನ್ನು ನಾಚುವ ರೀತಿಯಲ್ಲಿ ಇವರು ಜನಹಿತದ ನಡೆಯನ್ನು ತೋರಿಸಿದ್ದಾರೆ.
ಇವರ ಈ ಕೈಂಕರ್ಯ ಕಂಡು ಅಭಿಮಾನಿಗಳಾದವರು ಅವೆಷ್ಟೋ ಮಂದಿ, ಪೊಲೀಸರು, ಸರ್ಕಾರಿ ಅಧಿಕಾರಿಗಳೂ ಕೂಡಾ ಇವರ ಕೆಲಸ ಮೆಚ್ಚಿ, ಇವರು ಕೈಗೊಂಡ ಕಾರ್ಯದಲ್ಲಿ ಸಾಥ್ ನೀಡಿ ಗಮನಸೆಳೆದಿದ್ದಾರೆ.
ಉಡುಪಿಯ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಕೂಡಾ ಇವರ ಈ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ, ಪೂಜಾರಿಯವರ ಕೆಲಸಗಳನ್ನು ಕೊಂಡಾಡಿದ್ದಾರೆ. ಮನೆ ನಿರ್ಮಾಣ, ಆರ್ಥಿಕ ನೆರವು, ಆಶಾ ಕಾರ್ಯಕರ್ತೆಯರಿಗೆ ನೆರವು, ಆರೋಗ್ಯ ಕಾರ್ಯಕರ್ತರಿಗೂ ಅಗತ್ಯ ಸೌಲಭ್ಯ ಕಲ್ಪಿಸಿರುವ ಗೋವಿಂದ ಬಾಬು ಪೂಜಾರಿಯವರನ್ನು ಅಭಿನಂಧಿಸಿದ್ದಾರೆ.
ಇದನ್ನೂ ಓದಿ.. ಯಾರು ಈ ಗೋವಿಂದ ಪೂಜಾರಿ..?
ಬೈಂದೂರು ತಹಶಿಲ್ದಾರ್ ಶೋಭಾಲಕ್ಷ್ಮಿ, ಪೊಲೀಸ್ ಅಧಿಕಾರಿ ಸಂಗೀತ, ಪ.ಪಂ.ಮುಖ್ಯಾಧಿಕಾರಿ ನವೀನ್ ಹಾಗೂ ಲಯನ್ಸ್ ಸಂಸ್ಥೆಯ ಪ್ರಮುಖರೂ ಇವರ ಸಮಾಜಮುಖಿ ಕೆಲಸಕ್ಕೆ ಸಾಥ್ ನೀಡಿ ಎಲ್ಲರ ಕುತೂಹಲದ ಕೇಂದ್ರ ಬಿಂದುವಾಗಿದ್ದರು.
ಜೀವಜಲ ಹರಿಸಿದ ‘ಆಧುನಿಕ ಭಗೀರಥ’..!!
ಕಳೆದ ತಿಂಗಳು ಬೈಂದೂರು ಸುತ್ತಮುತ್ತ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದ ಹಳ್ಳಿಗಳಿಗೆ ತನ್ನ ಸ್ವಂತ ಖರ್ಚಿನಲ್ಲೇ ಜೀವಜಲ ಹರಿಸಿ ರಾಜ್ಯವ್ಯಾಪಿ ಸುದ್ದಿಯಾಗಿದ್ದ ಗೋವಿಂದ ಬಾಬು ಪೂಜಾರಿ, ಕಳೆದ ವರ್ಷ ಕುಂದಾಪುರ ಸಮೀಪದ ಹಳ್ಳಿಗಳಿಗೂ ನೀರಿನ ಸೌಲಭ್ಯ ಕಲ್ಪಿಸಿ ಉಡುಪಿ ಜಿಲ್ಲೆಯ ‘ಆಧುನಿಕ ಭಗೀರಥ’ ಅನ್ನಿಸಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ತೌಕ್ತೆ ಚಂಡಮಾರುತದ ಹೊಡೆತಕ್ಕೆ ಸಿಕ್ಕಿ ಮನೆ ಕಳೆದುಕೊಂಡವರಿಗೆ ಸೂರು ಕಲ್ಪಿಸಿ ಮಾನವೀಯತೆ ಮೆರೆದಿದ್ದಾರೆ. ಬಡ ಕುಟುಂಬಗಳಿಗೆ ಮನೆ ಕಟ್ಟಲು ನೆರವು, ವೈದ್ಯಕೀಯ ನೆರವು ನೀಡಿದ ಪ್ರಸಂಗಗಳಿಂದಲೂ ಅವರು ಅಗಾಗ್ಗೆ ಸುದ್ದಿಯಾಗುತ್ತಿದ್ದಾರೆ.