ಬೆಂಗಳೂರು: ಹೊಸ ರಾಷ್ಟ್ರೀಯ ಸಹಕಾರ ನೀತಿ ಕರಡು ಸಮಿತಿಯ ಸಭೆಯು ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದಲ್ಲಿ ಮಾಜಿ ಕೇಂದ್ರ ಸಚಿವರು ಹಾಗೂ ಕರಡು ಸಮಿತಿ ಅಧ್ಯಕ್ಷರಾದ ಸುರೇಶ್ ಪ್ರಭಾಕರ್ ಪ್ರಭು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ಸುರೇಶ್ ಪ್ರಭು ಅವರು, ಸಹಕಾರ ಕ್ಷೇತ್ರವನ್ನು ಬಲಪಡಿಸಿ ಸಮಗ್ರ ಅಭಿವೃದ್ಧಿಗಾಗಿ ನೂತನ ನೀತಿ ರಚಿಸಲಾಗುತ್ತಿದ್ದು ಇದಕ್ಕೆ ತಮ್ಮೆಲ್ಲರ ಸಹಕಾರ ಅವಶ್ಯಕವಾಗಿದೆ ಎಂದರು.
ಸಹಕಾರ ಕ್ಷೇತ್ರದ ವ್ಯವಹಾರ ಮತ್ತು ಆಡಳಿತದ ಎಲ್ಲಾ ಅಂಶಗಳನ್ನು ಒಳಗೊಂಡ ಪ್ರಮುಖ ವಿಷಯಗಳ ಕುರಿತು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಪ್ರಸ್ತಾಪಿಸಿದರು.
ಸಹಕಾರ ಕ್ಷೇತ್ರದ ಸಮಗ್ರ ಬೆಳವಣಿಗೆಗೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಪರಸ್ಪರ ಚರ್ಚೆ ನಡೆಸಲಾಯಿತು. ಸಚಿವರು, ಅಧಿಕಾರಿಗಳು ನೀಡಿದ ಸಲಹೆಗಳನ್ನು ಟಿಪ್ಪಣಿ ಮಾಡಿಕೊಳ್ಳುವುದರ ಜೊತೆಗೆ ಸಹಕಾರ ಕ್ಷೇತ್ರದಲ್ಲಿನ ಸಮಸ್ಯೆಗಳು ಹಾಗೂ ಅವುಗಳಿಗೆ ಪರಿಹಾರ ಕ್ರಮಗಳ ಬಗ್ಗೆ ಕೂಡ ಸುರೇಶ್ ಪ್ರಭು ಅವರು ಚರ್ಚಿಸಿದರು.
ಸಭೆಯಲ್ಲಿ ಶಾಸಕರು ಹಾಗೂ ಸಹಕಾರ ಮಹಾಮಂಡಳದ ಅಧ್ಯಕ್ಷರಾದ ಜಿ.ಟಿ.ದೇವೇಗೌಡ, ಮಾರಾಟ ಮಹಾಮಂಡಳದ ಅಧ್ಯಕ್ಷರಾದ ಡಾ.ಎಮ್.ಎನ್.ರಾಜೇಂದ್ರಕುಮಾರ್, ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಶಂಕರ್, ಸಹಕಾರ ಸಂಘಗಳ ನಿಬಂಧಕರಾದ ಕ್ಯಾಪ್ಟನ್ ಕೆ. ರಾಜೇಂದ್ರ ಅವರುಗಳು ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.







































































