ಬೆಂಗಳೂರು: ಯಡಿಯೂರಪ್ಪ ಅವರನ್ನು ಬ್ಲಾಕ್ ಮೇಲೆ ಮಾಡಿ ಪುತ್ರ ವಿಜಯೇಂದ್ರ ಅವರನ್ನು ವರುಣಾದಲ್ಲಿ ನಿಲ್ಲಿಸಲು ಬಿಜೆಪಿ ನಾಯಕರ ಒಂದು ಗುಂಪು ಪ್ರಯತ್ನ ನಡೆಸಿದೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ದೂರಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಚುನಾವಣೆ ಜ್ವರ ಆರಂಭವಾಗಿದೆ. ನಿರೀಕ್ಷೆಯಂತೆ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ಬಿಜೆಪಿ ವೈಫಲ್ಯ ಹಾಗೂ ಗುಂಪುಗಾರಿಕೆಯಿಂದ ಬಿಜೆಪಿ ಶಾಸಕರು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆಚೆಂದರು.
ನಮಗೆ ಬಂದಿರುವ ಮಾಹಿತ ಪ್ರಕಾರ ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಬ್ಲಾಕ್ ಮೇಲೆ ಮಾಡುವ ಪ್ರಯತ್ನ ಮುಂದುವರಿಸಿದ್ದು, ಅವರ ಮೇಲೆ ಒತ್ತಡ ಹಾಕಿ ಅರ ಪುತ್ರ ವಿಜಯೇಂದ್ರರನ್ನು ವರುಣಾದಲ್ಲಿ ನಿಲ್ಲಿಸಲು ತೀರ್ಮಾನಿಸಿದೆ ಎಂದರು.
ಜು.25, 2021 ಬಿಜೆಪಿ ಇತಿಹಾಸದಲ್ಲಿ ಕಪ್ಪು ಚುಕ್ಕೆ. ಕಾರಣ ಯಡಿಯೂರಪ್ಪ ಅವರು ಕಣ್ಣೀರು ಹಾಕಿ ರಾಜೀನಾಮೆ ನೀಡಿದರು. ಯಡಿಯೂರಪ್ಪ ಅವರನ್ನು ಬಳಸಿಕೊಂಡು ವ್ಯವಸ್ಥಿತವಾಗಿ ಅವರನ್ನು ಮೂಲೆಗುಂಪು ಮಾಡಲು ಮುಂದಾಗಿದೆ ಎಂದು ವಿಶ್ಲೇಷಿಸಿದ ರಮೇಶ್ ಬಾಬು ಅವರು, ಮಾಜಿ ಸಿಎಂ ಯಡಿಯೂರಪ್ಪ ಅವರು ವಿಜಯೇಂದ್ರ ಅವರನ್ನು ಎಂಎಲ್‌ಸಿ ಮಾಡಿ ರಾಜ್ಯ ಸಂಪುಟದಲ್ಲಿ ಹಾಗೂ ರಾಂಘವೇಂದ್ರ ಅವರನ್ನು ಕೇಂದ್ರ ಸಂಪುಟದಲ್ಲಿ ಸೇರಿಸುವಂತೆ ಬಿಜೆಪಿ ನಾಯಕರಿಗೆ ತಿಳಿಸಿದರೂ ಇದುವರೆಗೂ ಯಾವುದೂ ಸಾಧ್ಯವಾಗಿಲ್ಲ. ವಿಜಯೇಂದ್ರ ಅವರ ಮೇಲೆ ಐದಾರೂ ಇಡಿ ಹಾಗೂ ಐಟಿ ಪ್ರಕರಣಗಳು ಬಾಕಿ ಇವೆ. ಇವುಗಳನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ಅವರ ವಿರುದ್ಧ ಸ್ಪರ್ಧಿಸಲು ಒತ್ತಾಯಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಯಡಿಯೂರಪ್ಪ ಅವರು ಆರು ತಿಂಗಳ ಮುನ್ನವೇ ಶಿಕಾರಿಪುರದಲ್ಲಿ ವಿಜಯೇಂದ್ರಗೆ ಟಿಕೆಟ್ ನೀಡುವುದಾಗಿ ಹೇಳಿದ್ದರು. ಆದರೆ ಈಗ ವರುಣಾದಲ್ಲಿ ಸ್ಪರ್ಧಿಸುವ ಬಗ್ಗೆ ಒತ್ತಡ ಹಾಕುತ್ತಿದ್ದಾರೆ ಎಂದ ರಮೇಶ್ ಬಾಬು,. ಇನ್ನೂ ಬಿಜೆಪಿ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿಲ್ಲ. ತಮ್ಮ ಪುತ್ರನಿಗೆ ಶಿಕಾರಿಪುರದಲ್ಲಿ ಟಿಕೆಟ್ ಸಿಗುವ ಆತಂಕ ಯಡಿಯೂರಪ್ಪ ಅವರಿಗೆ ಇದೆ. ಒಳ ಮೀಸಲಾತಿ ವಿಚಾರದಲ್ಲಿ ಶಿಕಾರಿಪುರದಲ್ಲಿ ಯಾವ ಪರಿಸ್ಥಿತಿ ನಿರ್ಮಿಸಿದ್ದಾರೆ. ಇಂತಹ ಅನೇಕ ತಂತ್ರಗಾರಿಕೆಗಳನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ದೂರಿದರು.
ಜಂಟಿ ಮಾಧ್ಯಮಗೋಷ್ಠಿ, ಕೆಪಿಸಿಸಿ ಕಚೇರಿ. https://t.co/DVRmzgkPod
— Karnataka Congress (@INCKarnataka) March 31, 2023
ವಿರೋಧ ಪಕ್ಷಗಳ ಮೇಲೆ ಬಿಜೆಪಿ ಸರ್ಕಾರದ ಇಡಿ ಮತ್ತು ಐಟಿ ದಾಳಿ ಸದ್ಯದಲ್ಲೇ ಆರಂಭವಾಗುವ ಸಾಧ್ಯತೆ ಇದೆ. ಬಿಜೆಪಿಯವರು ಏನೇ ಮಾಡಿದರೂ ರಾಜ್ಯದ ಜನರ ಮನಸ್ಸು ಬದಲಿಸಲು ಆಗುವುದಿಲ್ಲ ಎಂದು ರಮೇಶ್ ಬಾಬು ಹೇಳಿದರು.
ಇತ್ತೀಚೆಗೆ ಸಿದ್ದರಾಮಯ್ಯ ಅವರು ಜೆಡಿಎಸ್ ಎಷ್ಟೇ ಬೊಂಬಡ ಬಡೆದುಕೊಂಡರು ಅಧಿಕಾರಕ್ಕೆ ಬರುವುದಿಲ್ಲ ಎಂದಿದ್ದರು. ಇದನ್ನು ಟೀಕಿಸುವ ಭರದಲ್ಲಿ ಕುಮಾರಸ್ವಾಮಿ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದಾರೆ. ಅವರು ಬಿಜೆಪಿ ಬಿ ಟೀಂ ಆಗಿ ಕೆಲಸ ಮಾಡುತ್ತಿದ್ದು, ಈಗಾಗಲೇ ಬಿಜೆಪಿ ನಾಯಕರನ್ನು ಭೇಟಿ ಮಾಡಿ ಸಂಪರ್ಕದಲ್ಲಿದ್ದಾರೆ. ಕಾಂಗ್ರೆಸ್ ಗೆಲ್ಲುವ ಕ್ಷೇತ್ರಗಳಲ್ಲಿ ಬಿಜೆಪಿ ನಿರ್ದೇಶದನದಂತೆ ಅಭ್ಯರ್ಥಿ ಕಣಕ್ಕಿಳಿಸುವ ಭರವಸೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಜನರ ಬೆಂಬಲದೊಂದಿಗೆ ಇವರ ಷಡ್ಯಂತ್ರವನ್ನು ಮೆಟ್ಟಿನಿಂತು 135-140 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ರಮೇಶ್ ಬಾಬು ವಿಶ್ಲೇಷಣೆ ಮಾಡಿದರು.