ಬೆಂಗಳೂರು: ರಾಜ್ಯದ ಗಡಿ ವಿಚಾರ ಮುಗಿದ ಅಧ್ಯಾಯ. ಎಲ್ಲವೂ ಸರಿಯಾಗಿ ಇತ್ಯರ್ಥವಾಗಿದೆ. ಠಾಕ್ರೆ ಅವರ ಹೇಳಿಕೆ ರಾಜಕೀಯ ಪ್ರೇರಿತ. ರಾಜ್ಯ ಸರ್ಕಾರ ಅನಗತ್ಯವಾಗಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ತೀರ್ಮಾನಿಸಿದ್ದೆ, ಠಾಕ್ರೆ ಅವರ ಹೇಳಿಕೆಗೆ ಪ್ರೇರಣೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ರಾಜ್ಯಗಳ ವಿಂಗಡನೆಯಾಗುವಾಗ ತೆಗೆದುಕೊಂಡ ಗಡಿ ತೀರ್ಮಾನ ಈಗ ಮುಗಿದ ಅಧ್ಯಾಯ. ಕರ್ನಾಟಕ ಭೂಪಟ ಸ್ಪಷ್ಟವಾಗಿದ್ದು, ನಮ್ಮ ಊರು, ಗ್ರಾಮಗಳೆಲ್ಲ ವಿಂಗಡಣೆ ಆಗಿವೆ. ನಾವು ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ. ನಮ್ಮಿಂದ ಒಂದಿಂಚೂ ಅವರಿಗೆ ಹೋಗುವುದಿಲ್ಲ, ಅವರಿಂದಲೂ ಒಂದಿಂಚೂ ನಮಗೆ ಬರುವುದಿಲ್ಲ ಎಂದರು. ಗಡಿ ವಿಚಾರದಲ್ಲಿ ಮಹಾಜನ್ ವರದಿ ಇದೆ. ಎಲ್ಲ ಭಾಗದ ಗಡಿ ನಿಗದಿಯಾಗಿದೆ. ಗೊಂದಲ ಸೃಷ್ಟಿಸಲು, ರಾಜಕೀಯ ಉದ್ದೇಶದಿಂದ ಠಾಕ್ರೆ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಕರ್ನಾಟಕ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ನಿರ್ಧಾರ ಉದ್ಧವ್ ಠಾಕ್ರೆ ಅವರ ಹೇಳಿಕೆಗೆ ಪ್ರೇರಣೆ ಎಂದವರು ಹೇಳಿದರು.
ರಾಜ್ಯದಲ್ಲಿನ ಮರಾಠಿಗರ ಅಭಿವೃದ್ಧಿಗೆ ಎಲ್ಲ ಕ್ರಮ ಕೈಗೊಳ್ಳಲಾಗಿತ್ತು. ಹೀಗಾಗಿ ಮರಾಠ ಪ್ರಾಧಿಕಾರ ಅನಗತ್ಯವಾಗಿತ್ತು. ಇದರಿಂದ ಈ ವಿವಾದ ಎದ್ದಿದೆ. ಈ ಸರ್ಕಾರ ಧರ್ಮ, ಜಾತಿಗಳ ನಡುವೆ ವಿಷಬೀಜ ಬಿತ್ತಿ, ಆ ಭಾಗದ ಜನರಲ್ಲಿ ಗೊಂದಲ ಸೃಷ್ಟಿಸಿದೆ. ವಿಭಿನ್ನ ಅಭಿಪ್ರಾಯ ಮೂಡುವಂತೆ ಬೀಜ ಬಿತ್ತಿರುವುದೇ ರಾಜ್ಯ ಬಿಜೆಪಿ ಸರ್ಕಾರ ಎಂದು ಡಿಕೆಶಿ ದೂರಿದರು.
ಸಚಿವ ಯೋಗೇಶ್ವರ್ ವಿರುದ್ಧ ಬಿಜೆಪಿ ನಾಯಕರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರದಲ್ಲಿ ಅವರು ಮಾಹಿತಿ ಇಟ್ಟುಕೊಂಡು ಮಾತನಾಡುತ್ತಿದ್ದಾರೆ. ನನಗೂ ಕೆಲವು ವಿಚಾರಗಳು ಗೊತ್ತಿವೆ. ಆ ಬಗ್ಗೆ ಸೂಕ್ತ ಸಮಯದಲ್ಲಿ ಮಾತನಾಡುತ್ತೇನೆ ಎಂದು ಡಿಕೆಶಿ ಹೇಳಿದರು. .