ತುಮಕೂರು: ಸುಮಾರು ವರ್ಷಗಳಿಂದ ಸ್ವಾಧೀನದಲ್ಲಿದ್ದ ರೈತರಿಗೆ ಸಾಗುವಳಿ ಚೀಟಿ ಸಿಕ್ಕಿಲ್ಲ. ಬೆಂಗಳೂರಿನ ಭೂಮಾಫಿಯಾದವರಿಗೆ ಸರ್ಕಾರದ ಮಾನದಂಡ ಪಾಲಿಸದೆ ಸಿಗುತ್ತಿರುವ ಸಾಗುವಳಿ ಚೀಟಿ. ಇದು ಕಲ್ಪತರು ನಾಡು ತುಮಕೂರು ಜಿಲ್ಲೆಯ ಸತ್ಯಾಗ್ರಹನಿರತ ರೈತರ ಆರೋಪ.
ರೈತ ಸಂಘದ ನೇತೃತ್ವದಲ್ಲಿ, ಸೋಮವಾರದಿಂದ ಕೊರಟಗೆರೆ ತಾಲ್ಲೂಕು ಕಚೇರಿ ಆವರಣದಲ್ಲಿ ಆಹೋರಾತ್ರಿ ಅನಿರ್ದಿಷ್ಟಾವಧಿ ವರೆಗೆ ಧರಣಿನಡೆಸುತ್ತಿರುವ ಅನ್ನದಾತರು ವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕೊರಟಗೆರೆ ತಾಲ್ಲೂಕಿನ ಬಿಡಿಪುರ ಗ್ರಾಮ ಪಂಚಾಯಿತಿ ಅಕ್ಕಜಿಹಳ್ಳಿ ಬಳಿ ರೈತರನ್ನು ಒಕ್ಕಲೆಬ್ಬಿಸಿ ಬೆಂಗಳೂರಿನ ಭೂಮಾಫಿಯಾಗಳ ಹಣದ ಆಸೆಗಾಗಿ ಅಕ್ರಮ ಸಾಗುವಳಿ ಚೀಟಿ ನೀಡಲಾಗಿದೆ ಎಂದು ರೈತ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಆಕ್ರೋಶ ವ್ಯಕ್ತಪಡಿಸಿದರು
ಈ ಜಾಗದಲ್ಲಿ ರಾತ್ರೋರಾತ್ರಿ ಮನೆ ನಿರ್ಮಾಣ ಮಾಡಿ ರೈತರು ಬೆಳೆದ ಬೆಳೆಯನ್ನು ಜೆಸಿಪಿ ಮೂಲಕ ನಾಶಮಾಡಿದ್ದಾರೆ. ಅನ್ನ ನೀಡುವ ರೈತರ ಪರಿಸ್ಥಿತಿ ಹೀಗಾದರೆ ಮುಂದಿನ ದಿನಗಳಲ್ಲಿ ಜನಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿರುವ ಅವರು, ತಾಲೂಕು ಆಡಳಿತ ಯಾರ ಪರವಾಗಿದೆ. ಕಾನುನು ಜೀವಂತವಾಗಿದೆಯೇ. ಇಂದು ಹಣವಂತರ ಪರ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ಅನ್ಯಾಯಕ್ಕೊಳಗಾದ ರೈತರಿಗೆ ನ್ಯಾಯ ಸಿಗುವವರೆಗೂ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಈ ಹೋರಾಟಗಾರರು ತಿಳಿಸಿದ್ದಾರೆ. ಕಾನೂನು ಸಚಿವರ ತವರು ಜಿಲ್ಲೆಯಲ್ಲೇ ರೈತರು ಅನ್ಯಾಯಕ್ಕೊಳಗಾಗಿದ್ದು ಇದು ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ.
ಈ ಹೋರಾಟದಲ್ಲಿ ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷ ಸಿದ್ದರಾಜು, ಜಿಲ್ಲಾ ಕಾರ್ಯದರ್ಶಿ ರುದ್ರೇಶ್ ಗೌಡ, ಪ್ರಸನ್ನಕುಮಾರ್, ಬಸವರಾಜ್, ಕಾಂತರಾಜ್, ಪದ್ಮಾವತಿ ಲಕ್ಷ್ಮ ನಾಯಕ್, ನರಸಿಂಹಯ್ಯ, ಕಾಮಣ್ಣ, ರವಿ ಚೇತನ್, ಸೇರಿದಂತೆ ರೈತ ಮುಖಂಡರನೇಕರು ಭಾಗವಹಿಸಿದ್ದಾರೆ