ಬೆಂಗಳೂರು: ಕೇಂದ್ರ ಸರ್ಕಾರ ರೂಪಿಸಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಸುತ್ತ ಮುತ್ತಲ ರಾಜ್ಯಗಳಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ಬುಧವಾರ ಕೆಪಿಸಿಸಿ ನಾಯಕರೂ ಅಖಾಡಕ್ಕೆ ಧುಮುಕಲಿದ್ದಾರೆ.
ಮಂಗಳವಾರ ಕೈ ನಾಯಕರ ನೇತೃತ್ವದಲ್ಲಿ ರೈತರು ರಾಜಭವನಕ್ಕೆ ಮುತ್ತಿಗೆ ಹಾಕುವ ಹೋರಾಟ ಹಮ್ಮಿಕೊಂಡಿದ್ದಾರೆ. ಕೃಷಿ ಕಾಯ್ದೆ ಜಾರಿಗೆ ಪ್ರಯತ್ನಿಸಿರುವುದು, ರಾಜ್ಯದಲ್ಲಿ ಕೊರೋನಾ ಪರಿಹಾರ ಹಣ ನೀಡದಿರುವುದು ಹಾಗೂ ಬೆಲೆ ಏರಿಕೆ, ತೆರಿಗೆ ಏರಿಕೆಯಂತಹ ಸರ್ಕಾರದ ಜನ ವಿರೋಧಿ ನೀತಿ ವಿರುದ್ಧ ಜನರ ಧ್ವನಿಯನ್ನು ಎತ್ತಲು ರಾಜಭವನ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ನಾವು ರೈತರ ಪರವಾಗಿ ನಿಲ್ಲುತ್ತೇವೆ. ಕರಾಳ ಕಾಯ್ದೆ ಕಿತ್ತುಹಾಕಬೇಕು ಎಂಬುದು ರೈತರ ಬೇಡಿಕೆ. ಅವರ ಬೇಡಿಕೆ ಈಡೇರುವವರೆಗೆ ನಾವು ಅವರ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುತ್ತೇವೆ. ಈ ಹಿನ್ನೆಲೆಯಲ್ಲಿ ಅವರಿಗೆ ಧ್ವನಿಯಾಗಲು ರಾಜಭವನ ಚಲೋ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ಡಿಕೆಶಿ ಹೇಳಿದರು.
ನಾವು ಶಿಸ್ತಿನ ಪ್ರತಿಭಟನೆ ಮಾಡಬೇಕಿದ್ದು, ಎಲ್ಲ ವಾಹನಗಳು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿ ಬಂದು, ಅಲ್ಲಿಂದ ಸ್ವಾತಂತ್ರ್ಯ ಉದ್ಯಾನವನಕ್ಕೆ ಬರಬೇಕು. ಈ ಬಗ್ಗೆ ಪೊಲೀಸ್ ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದೇವೆ ಎಂದ ಅವರು, ಈ ಸರ್ಕಾರದಿಂದ ನೊಂದಿರುವ ರೈತರು, ಎಲ್ಲ ವರ್ಗದ ಜನ ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.