ಹನೂರು: ಮಲೆ ಮಹದೇಶ್ವರ ಬೆಟ್ಟ ಸಮೀಪದ ನಾಗಮಲೆಗೆ ತೆರಳುತ್ತಿದ್ದ ವೇಳೆ ಚಿರತೆ ದಾಳಿಗೆ ಒಳಗಾದ 10 ವರ್ಷದ ಬಾಲಕ ಮೃತಪಟ್ಟಿರುವ ದುರ್ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ. ಬೆಂಗಳೂರು ಮೂಲದ ಹರ್ಷಿತ್ (10) ಮೃತ ಬಾಲಕ ಎಂದು ಗುರುತಿಸಲಾಗಿದೆ.
ಕುಟುಂಬದವರೊಂದಿಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ದೇವರ ದರ್ಶನಕ್ಕೆ ಬಂದಿದ್ದ ಹರ್ಷಿತ್, ಭಾನುವಾರ ಬೆಳಿಗ್ಗೆ ನಾಗಮಲೆಗೆ ತೆರಳುತ್ತಿದ್ದ ವೇಳೆ ಏಕಾಏಕಿ ಚಿರತೆ ದಾಳಿ ನಡೆಸಿದೆ. ಬಾಲಕನನ್ನು ಎಳೆದೊಯ್ದ ಚಿರತೆಯಿಂದಾಗಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.
ಘಟನೆಯ ಬಳಿಕ ಸ್ಥಳೀಯರು ಹಾಗೂ ಕುಟುಂಬಸ್ಥರು ಬಾಲಕನಿಗಾಗಿ ಹುಡುಕಾಟ ನಡೆಸಿದ್ದು, ಸುಮಾರು ಅರ್ಧ ಗಂಟೆಯ ನಂತರ ಹರ್ಷಿತ್‌ನ ಮೃತದೇಹ ಪತ್ತೆಯಾಗಿದೆ. ಬಾಲಕನ ಕತ್ತು ಸೇರಿದಂತೆ ದೇಹದ ಹಲವೆಡೆ ಗಂಭೀರ ಗಾಯಗಳಾಗಿರುವುದಾಗಿ ತಿಳಿದು ಬಂದಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವಾಚರ್‌ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿರಿಯ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಾಗಿದೆ.
ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಚಿರತೆ ದಾಳಿ ಪ್ರಕರಣಗಳು ಹೆಚ್ಚಾಗುತ್ತಿರುವುದು ಭಕ್ತರು ಮತ್ತು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಹಿಂದೆ ಮಂಡ್ಯ ಮೂಲದ ಪಾದಯಾತ್ರಿಕ ಯುವಕನೊಬ್ಬ ಚಿರತೆ ದಾಳಿಗೆ ಬಲಿಯಾಗಿದ್ದ. ಬಳಿಕ ಮತ್ತೊಂದು ಘಟನೆಯಲ್ಲಿ ಬಾಲಕನೊಬ್ಬ ಗಾಯಗೊಂಡು ಪಾರಾಗಿದ್ದ. ಇದೀಗ ಮತ್ತೆ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿದೆ.


























































