ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿನ ಕಿತ್ತಾಟ ನಂತರ ಇದೀಗ ಸೆಲೆಬ್ರೆಟಿಗಳು ಪೊಲೀಸ್ ಠಾಣೆಯ ಮೆಟ್ಟಿಲೇರಿರುವುದೇ ಅಚ್ಚರಿ ಹಾಗೂ ಕುತೂಹಲಕಾರಿ. ಸಿನಿಮಾಗೆ ಕಥೆ ನೀಡುತ್ತಿದ್ದ ಚಂದ್ರಚೂಡ್ ಇದೀಗ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿಯವರ ಬಗ್ಗೆಯೇ ಕಥೆ ಬರೆಯಲು ವೇದಿಕೆ ಕಲ್ಪಿಸಿದ್ದಾರೆ. ಅಚ್ಚರಿಯ ನಿರ್ಧಾರವೊಂದರಲ್ಲಿ ‘ಬಿಗ್‌ಬಾಸ್’ ಸ್ಪರ್ಧಿಗಳ ಕಿತ್ತಾಟ ಪೊಲೀಸ್ ಅಂಗಳ ಸೇರಿದೆ.
ಏನಿದು ವಿದ್ಯಮಾನ..?
ಡ್ರಗ್ ಕೇಸ್ ಸಂಬಂಧಿಸಿದಂತೆ ರಾಗಿಣಿ, ಸಂಜನಾ ವಿರುದ್ದ ಗುಡುಗುತ್ತಿದ್ದ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಕೆಲವು ದಿನಗಳ ಹಿಂದಷ್ಟೇ ಕಿರುತೆರೆ ರಿಯಾಲಿಟಿ ಶೋ ‘ಬಿಗ್‌ಬಾಸ್’ ಪೂರ್ತಿಗೊಳಿಸಿ ಹೊರಬಂದಿದ್ದಾರೆ. ಅಷ್ಟರಲ್ಲೇ ಡ್ರಗ್ ಕೇಸ್ ಸಂಬಂಧದ ಪೊಲೀಸ್ ತನಿಖಾ ವರದಿಯಲ್ಲಿನ ಕೆಲವು ಸಂಗತಿಗಳು ಪ್ರತಿಧ್ಚನಿಸಿದೆ. ಇದರಲ್ಲಿನ ಉಲ್ಲೇಖಗಳನ್ನು ಆಧರಿಸಿ ನಟಿ, ನಿರೂಪಕಿ ಅನುಶ್ರೀ ವಿರುದ್ದ ಗುಡುಗಿದ ಸಂಬರಗಿ ಮತ್ತೆ ಹೋರಾಟದ ಧ್ವನಿಯಾದರು. ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ ಅದೇ ‘ಬಿಗ್‌ಬಾಸ್’ನ ಸ್ಪರ್ಧಿ ಚಂದ್ರಚೂಡ್ ಅವರು ಬೆಂಗಳೂರು ಪೊಲೀಸ್ ಆಯುಕ್ತರಿಗೆ ನೀಡಿದ್ದಾರೆನ್ನಲಾದ ದೂರಿನ ಸುದ್ದಿಯಿಂದಾಗಿ ಸಂಬರಗಿ ಅವರು ಕುತೂಹಲದ ಕೇಂದ್ರಬಿಂದುವಾಗಿದ್ದಾರೆ. ಕಮೀಷನರ್ ಕಚೇರಿ ಭೇಟಿ ನಂತರ ಚಂದ್ರಚೂಡ್ ಮಾಡಿರುವ ಆರೋಪಗಳೂ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಚಂದ್ರಚೂಡ್ ಮಾಡಿರುವ ಆರೋಪಗಳ ಹೈಲೈಟ್ಸ್..
ರಾಜಕಾರಣಿ ಹಾಗೂ ಸಿನಿರಂಗದ ನಟ-ನಟಿಯರ ವಿರುದ್ಧ ಸೂಕ್ತ ಸಾಕ್ಷ್ಯಧಾರವಿಲ್ಲದೆ ಸುಳ್ಳು ಆರೋಪ ಮಾಡಿ ಪ್ರಶಾಂತ್ ಸಂಬರಗಿ ಅವರು ಬ್ಲ್ಯಾಕ್ ಮೇಲ್ ತಂತ್ರ ಅನುಸರಿಸಿದ್ದಾರೆ ಎಂಬುದು ಚಂದ್ರಚೂಡ್ ಆರೋಪ. ಈ ಸಂಬಂಧ ಕ್ರಮ ಕೈಗೊಳ್ಳಬೇಕೆಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಚಂದ್ರಚೂಡ್ ಅವರ ಆಗ್ರಹ.
ಈ ಕುರಿತಂತೆ ಮಾಹಿತಿ ಚಂದ್ರಚೂಡ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ರಾಜಕಾರಣಿ, ಸಿನಿಮಾ ನಟ-ನಟಿಯರು, ಪ್ರಭಾವಿಗಳ ವಿರುದ್ಧ ಯಾವುದೇ ಸಾಕ್ಷ್ಯಾಧಾರವಿಲ್ಲದಿದ್ದರೂ ಸಂಬರಗಿ ಅವರು ಆರೋಪಗಳನ್ನು ಮಾಡಿ, ಮಾಧ್ಯಮಗಳ ಮುಖಾಂತರ ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ ಎಂಬುದು ಚಂದ್ರಚೂಡ್ ಆರೋಪ. 3 ವರ್ಷಗಳ ಹಿಂದೆ ನಟಿ ಶೃತಿ ಹರಿಹರನ್ ಅವರಿಗೆ ಕ್ರೈಸ್ತ ಮಿಷನರಿಯಿಂದ ಕೊಟ್ಯಂತರ ಹಣ ಸಂದಾಯವಾಗಿದೆ ಎಂದು ಆರೋಪಿಸಿದ್ದರು. ಅದೇ ಹಣ ಬಳಸಿಕೊಂಡ ದೇಶದ್ರೋಹ ಚಟುವಟಿಕೆಗಳಿಗೆ ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಆದರೆ ಪೊಲೀಸ್ ಠಾಣೆಗೆ ದೂರು ನೀಡದೆ ನುಣುಚಿಕೊಂಡಿದ್ದರು. ಈ ಸಂಬಂಧ ನಟಿ ಶೃತಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದೇ ರೀತಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಜಮೀರ್ ಅಹಮದ್ ಅವರು ಶ್ರೀಲಂಕಾದ ಕ್ಯಾಸಿನೋಗೆ ಹೋಗಿ ಮೋಜು ಮಸ್ತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದ ಸಂಬರಗಿ ಆನಂತರ ಪೊಲೀಸರಿಗೆ ದಾಖಲಾತಿ ನೀಡಲಿಲ್ಲ. ಕೆಲವು ನಟಿಯರು ಡ್ರಗ್ಸ್ ನಿಂದಲೇ ಹಣ ಸಂಪಾದನೆ ಮಾಡುತ್ತಾರೆ. ಅದರ ಮೂಲ ಗೊತ್ತು ಎಂದು ಮಾಧ್ಯಮಗಳ ಮುಂದೆ ಹೇಳಿದ್ದ ಅವರು, ಈ ಸಂಬಂಧ ದಾಖಲೆಗಳನ್ನು ಪೊಲೀಸರಿಗೆ ನೀಡಿಲ್ಲವೇಕೆ? ಎಂಬುದು ಚಂಧ್ರಚೂಡ್ ಆರೋಪ.
ಕೆಲವು ದಿನಗಳ ಹಿಂದೆ ನಿರೂಪಕಿ ಅನುಶ್ರೀ ವಿರುದ್ದವೂ ಸಂಬರಗಿ ಆರೋಪ ಮಾಡಿರುವ ಬಗ್ಗೆಯೂ ಚಂದ್ರಚೂಡ್ ಗುಡುಗಿದ್ದಾರೆ. ಮಂಗಳೂರು, ಬೆಂಗಳೂರಿನಲ್ಲಿ ಅನುಶ್ರೀ ಅವರು ಕೋಟ್ಯಂತರ ರೂ. ಮೌಲ್ಯದ ಮನೆ ಹೊಂದಿದ್ದಾರೆ ಎಂದು ಆರೋಪಿಸಿದ್ದ ಪ್ರಶಾಂತ್ ಸಂಬರಗಿ, ‘ಶುಗರ್ ಡ್ಯಾಡಿ’ ಎಂದು ಹೇಳುವ ಮೂಲಕ ಪರೋಕ್ಷವಾಗಿ ರಾಜಕಾರಣಿಯೊಬ್ಬರ ಆಡಿಯೊ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಈ ಎಲ್ಲಾ ಪ್ರಕರಣ ಗಮನಿಸಿದಾಗ ಅವರು ಬ್ಲಾಕ್ ಮೇಲ್ ತಂತ್ರ ಅನುಸರಿಸಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಚಂದ್ರಚೂಡ್ ಆರೋಪಿಸಿದ್ದಾರೆ.
ಈ ಕುರಿತಂತೆ ಪೊಲೀಸ್ ಆಯುಕ್ತರ ಗಮನಸೆಳೆದಿರುವುದಾಗಿ ಅವರು ತಿಳಿಸಿದ್ದಾರೆ.