ವಿರುಧುನಗರ: ವಿರುಧುನಗರ ಜಿಲ್ಲೆಯ ಕಟ್ಟನಾರಪಟ್ಟಿ ಸಮೀಪದ ಪಟಾಕಿ ಉತ್ಪಾದನಾ ಘಟಕದಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಸಾವಿನ ಸಂಖ್ಯೆ 25ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೋವಿಂದನಲ್ಲೂರಿನ ಮುತ್ತುಮಾಣಿಕ್ಕಂ ಒಡೆತನದ ವನಜ ಪಟಾಕಿ ಕಾರ್ಖಾನೆಯಲ್ಲಿ ಭಾನುವಾರ ಸಂಭವಿಸಿದ ಈ ದುರ್ಘಟನೆ, ಉತ್ಪಾದನಾ ವೇಳೆ ಉಂಟಾದ ಘರ್ಷಣೆಯಿಂದ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ಸೂಚಿಸಿವೆ. ಸ್ಫೋಟದಿಂದ ಸ್ಫೋಟಕ ವಸ್ತುಗಳಿಗೆ ಬೆಂಕಿ ತಗುಲಿ, ಕಾರ್ಖಾನೆಯ ಕನಿಷ್ಠ ನಾಲ್ಕು ಕೊಠಡಿಗಳು ಸಂಪೂರ್ಣ ನಾಶವಾಗಿವೆ. ಸ್ಫೋಟದ ಶಬ್ದವು 10 ಕಿಲೋಮೀಟರ್ ದೂರದವರೆಗೆ ಕೇಳಿಬಂದಿದೆ ಎನ್ನಲಾಗಿದೆ.
ಘಟನೆ ವೇಳೆ 30ಕ್ಕೂ ಹೆಚ್ಚು ಕಾರ್ಮಿಕರು ಒಳಗಿದ್ದರೆಂದು ತಿಳಿದುಬಂದಿದ್ದು, ಭಾನುವಾರವೇ 23 ಸುಟ್ಟ ದೇಹಗಳನ್ನು ಪತ್ತೆಹಚ್ಚಲಾಗಿತ್ತು. ಬಳಿಕ ಗಾಯಗೊಂಡವರಲ್ಲಿ ಇಬ್ಬರು ಮಹಿಳೆಯರು ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದು, ಒಟ್ಟು ಮೃತರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಮೃತರನ್ನು ಪಂಚವರ್ಣಂ ಮತ್ತು ಪೆಚ್ಚಿಯಮ್ಮಳ್ ಎಂದು ಗುರುತಿಸಲಾಗಿದೆ.
12ಕ್ಕೂ ಹೆಚ್ಚು ಗಾಯಾಳುಗಳು ವಿರುಧುನಗರ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 21 ಶವಗಳನ್ನು ಗುರುತಿಸಲಾಗಿದ್ದು, ಉಳಿದ ನಾಲ್ಕು ಶವಗಳ ಗುರುತು ಪತ್ತೆ ಕಾರ್ಯ ಮುಂದುವರಿದಿದೆ.
ಘಟನೆಯ ಸಂಬಂಧವಾಗಿ ವಾಚಕರಪಟ್ಟಿ ಪೊಲೀಸರು ಕಾರ್ಖಾನೆ ನಡೆಸುತ್ತಿದ್ದ ಈಶ್ವರಿ ಮತ್ತು ಮುತ್ತುಮಾಣಿಕ್ಕಂ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪರಾರಿಯಾಗಿರುವ ದಂಪತಿಯನ್ನು ಬಂಧಿಸಲು ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ.
























































