ಟೆಹ್ರಾನ್: ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದ್ದು, ಅಮೆರಿಕದ ಮಿಲಿಟರಿಯ “ಸಶಸ್ತ್ರ ಕಡಲ್ಗಳ್ಳತನ”ಕ್ಕೆ ಶೀಘ್ರದಲ್ಲೇ ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಇರಾನ್ ಎಚ್ಚರಿಸಿದೆ.
ಮಾಧ್ಯಮ ವರದಿಗಳ ಪ್ರಕಾರ, ಓಮನ್ ಕೊಲ್ಲಿಯಲ್ಲಿ ಇರಾನ್ ವಾಣಿಜ್ಯ ಹಡಗಿನ ಮೇಲೆ ಅಮೆರಿಕದ ಪಡೆಗಳು ದಾಳಿ ನಡೆಸಿ, ಅದರ ಸಂಚರಣೆ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಿ, ಕಮಾಂಡೋಗಳೊಂದಿಗೆ ಹಡಗನ್ನು ವಶಕ್ಕೆ ಪಡೆದಿವೆ. ಈ ಘಟನೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಇರಾನ್‌ನ ಖತಮ್ ಅಲ್-ಅನ್ಬಿಯಾ ಕೇಂದ್ರ ಕಮಾಂಡ್, ಇದನ್ನು “ಕಾನೂನುಬಾಹಿರ ದಾಳಿ” ಎಂದು ಕರೆಯಿತು.
ಇದಕ್ಕೆ ಪ್ರತಿಯಾಗಿ, ಇರಾನ್ ಅಮೆರಿಕದ ಯುದ್ಧನೌಕೆಗಳ ಮೇಲೆ ಡ್ರೋನ್ ದಾಳಿ ನಡೆಸಿದ ಪರಿಣಾಮ, ಯುಎಸ್ ಪಡೆಗಳು ಹಿಮ್ಮೆಟ್ಟುವಂತಾಯಿತು ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಹಾರ್ಮುಜ್ ಜಲಸಂಧಿ ಸಮೀಪದಲ್ಲಿ ಪರಿಸ್ಥಿತಿ ಗಂಭೀರವಾಗಿರುವುದಾಗಿ ತಿಳಿದುಬಂದಿದೆ.
ಇದರಲ್ಲಿ, ಡೊನಾಲ್ಡ್ ಟ್ರಂಪ್ ಅಮೆರಿಕ ಪಡೆಗಳು ಇರಾನ್ ಧ್ವಜ ಹೊಂದಿದ ಹಡಗನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಹಡಗಿನ ಎಂಜಿನ್ ಕೋಣೆಗೆ ಹಾನಿ ಮಾಡಿ ಅದನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಇದರ ಮಧ್ಯೆ, ಅಮೆರಿಕದೊಂದಿಗೆ ನಡೆಯಬೇಕಿದ್ದ ಎರಡನೇ ಸುತ್ತಿನ ಶಾಂತಿ ಮಾತುಕತೆಯಲ್ಲಿ ಭಾಗವಹಿಸಲು ಇರಾನ್ ನಿರಾಕರಿಸಿದೆ. ಅಮೆರಿಕದ “ಇರಾನ್ ವಿರೋಧಿ” ನೌಕಾ ದಿಗ್ಬಂಧನ ಮುಂದುವರಿದಿರುವವರೆಗೆ ಯಾವುದೇ ಮಾತುಕತೆ ಸಾಧ್ಯವಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ.
























































