ಬೆಂಗಳೂರು,: ರಾಜ್ಯದಲ್ಲಿ ಉಷ್ಣತೆಯ ತೀವ್ರತೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಐದು ಜಿಲ್ಲೆಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದೆ. ಬಿಸಿಲಿನ ತಾಪಕ್ಕೆ ಜನರು ತತ್ತರಿಸಿ ಹೋಗಿದ್ದಾರೆ.
ಗದಗ, ವಿಜಯಪುರ, ಬಾಗಲಕೋಟೆ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ 40 ಡಿಗ್ರಿಗಿಂತ ಹೆಚ್ಚು ತಾಪಮಾನ ದಾಖಲಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಮಧ್ಯಾಹ್ನ ಸಮಯದಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿರುವುದರಿಂದ ಜನರು ಮನೆಯಿಂದ ಹೊರಬರಲು ಸಹ ಭಯಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಗಳು ಬಿಕೋಬಿದ್ದಂತಾಗಿದ್ದು, ತುರ್ತು ಕೆಲಸವಿದ್ದವರೇ ಹೊರಗೆ ಕಾಣಿಸುತ್ತಿದ್ದಾರೆ.
ವೈದ್ಯರು ಹಾಗೂ ಹವಾಮಾನ ಇಲಾಖೆ, ಅಗತ್ಯವಿಲ್ಲದೆ ಬಿಸಿಲಿನಲ್ಲಿ ಹೊರಗೆ ಹೋಗದಂತೆ, ಸಾಕಷ್ಟು ನೀರು ಸೇವಿಸುವಂತೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.
























































